ಕೋಲ್ಕತ್ತ: ಲೋಕಸಭೆಯ ಭದ್ರತಾ ವೈಫಲ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್‌ನಲ್ಲಿ ಮಾತನಾಡಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಒತ್ತಾಯಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರತಿಕ್ರಿಯಿಸಲು ಪ್ರಧಾನಿ 4 ದಿನ ತೆಗೆದುಕೊಂಡಿದ್ದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತ: ಲೋಕಸಭೆಯ ಭದ್ರತಾ ವೈಫಲ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್‌ನಲ್ಲಿ ಮಾತನಾಡಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಒತ್ತಾಯಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರತಿಕ್ರಿಯಿಸಲು ಪ್ರಧಾನಿ 4 ದಿನ ತೆಗೆದುಕೊಂಡಿದ್ದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷಗಳ ಹಾಗೂ ಜನರ ಒತ್ತಡದಿಂದಾಗಿ ಪ್ರಧಾನಿ ಈ ಬಗ್ಗೆ ಮೌನ ಮುರಿದಿದ್ದಾರೆ ಎಂದು ಚೌಧರಿ ಹೇಳಿದ್ದಾರೆ.
' ವಿಶ್ವದಲ್ಲಿ ಏನೇ ಆದರೂ, ಪ್ರಧಾನಿ ನರೇಂದ್ರ ಮೋದಿ 'ಎಕ್ಸ್'ನಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಆದರೆ ಸಂಸತ್ತಿನ ಭದ್ರತಾ ವೈಫಲ್ಯದ ಬಗ್ಗೆ ಪ್ರತಿಕ್ರಿಯಿಸಲು ಪ್ರಧಾನಿ ಮೋದಿಯವರಿಗೆ 4 ದಿನ ಬೇಕಾಯಿತು. ಘಟನೆ ನಡೆದ ಮರುದಿನವೇ ಸಂಸತ್‌ಗೆ ಬಂದು ಭಯಪಡಬೇಡಿ ಎಂದು ದೇಶದ ಜನರಿಗೆ ಅವರು ಆಶ್ವಾಸನೆ ನೀಡಬೇಕಿತ್ತು' ಎಂದು ಚೌಧರಿ ಇಲ್ಲಿ ಮಾಧ್ಯಮದವರೊಂದಿಗೆ ಹೇಳಿದರು.
'ವಿರೋಧ ಪಕ್ಷಗಳ ಹಾಗೂ ಜನರ ಒತ್ತಡದಿಂದಾಗಿ ಕೊನೆಗೂ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರು ಸಂಸತ್‌ಗೆ ಬಂದು ಈ ಬಗ್ಗೆ ಮಾತನಾಡಬೇಕು' ಎಂದು ಹೇಳಿದರು.
ಡಿ.13ರಂದು ಲೋಕಸಭೆಗೆ ನುಗ್ಗಿದ್ದ ಇಬ್ಬರು, ಜೋರಾಗಿ ಘೋಷಣೆಗಳನ್ನು ಕೂಗುತ್ತಾ ಸ್ಮೋಕ್ ಕ್ಯಾನ್‌ನಿಂದ ಹಳದಿ ಹೊಗೆ ಹಾರಿಸಿದ್ದರು. 2001ರ ಸಂಸತ್ ದಾಳಿಯ ಕಹಿ ನೆನಪಿನ ದಿನವೇ ನಡೆದಿದ್ದ ಈ ಘಟನೆ ದೇಶದಲ್ಲಿ ಭಾರಿ ಸಂಚಲನ ಉಂಟು ಮಾಡಿತ್ತು.
ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಸಂಸತ್‌ನಲ್ಲಿ ಉತ್ತರ ನೀಡಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳು ಗದ್ದಲ ನಡೆಸಿದ್ದು, ಕಲಾಪಕ್ಕೂ ಅಡ್ಡಿಯಾಗಿದೆ.
ಈ ಬಗ್ಗೆ ನಾಲ್ಕು ದಿನಗಳ ತರುವಾಯ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಮೋದಿ, 'ಸಂಸತ್ತಿನ ಭದ್ರತಾ ಲೋಪವನ್ನು ಹಗುರವಾಗಿ ಪರಿಗಣಿಸಲು ಆಗದು, ಈ ವಿಚಾರವಾಗಿ ಯಾರೂ ಕಚ್ಚಾಟದಲ್ಲಿ ತೊಡಗಬಾರದು' ಎಂದಿದ್ದರು.
ಹಿಂದಿ ದಿನಪತ್ರಿಕೆ 'ದೈನಿಕ್ ಜಾಗರಣ್'ಗೆ ಸಂದರ್ಶನ ನೀಡಿದ್ದ ಅವರು, 'ಘಟನೆಯ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ಕೈಗೊಂಡಿವೆ. ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ಘಟನೆಯ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಮಾಡಬೇಕು ಹಾಗೂ ಅವರ ಉದ್ದೇಶ ಏನಿತ್ತು ಎಂಬುದನ್ನು ಕಂಡುಕೊಳ್ಳಬೇಕು' ಎಂದು ಹೇಳಿದ್ದರು.