ಹರಿದ್ವಾರ: ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ ಮಂಗಳವಾರ ಇಟ್ಟಿಗೆ ಭಟ್ಟಿಯ ಗೋಡೆ ಕುಸಿದು ಆರು ಕಾರ್ಮಿಕರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾಬೋಲಿ ಗ್ರಾಮದ ಸಾನ್ವಿ ಇಟ್ಟಿಗೆ ಭಟ್ಟಿಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳದಲ್ಲಿದ್ದ ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಎಸ್‌ಪಿ) ಪ್ರಮೇಂದ್ರ ದೋಭಾಲ್ ಅವರು ತಿಳಿಸಿದ್ದಾರೆ.
ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದಾಗ ಗೋಡೆ ಕುಸಿದಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.
"ನಾವು ಅಪಘಾತಕ್ಕೆ ಕಾರಣವಾದ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದೇವೆ. ತಪ್ಪಿತಸ್ಥರು ಯಾರೇ ಆದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು" ಎಂದು ದೋಭಾಲ್ ಹೇಳಿದ್ದಾರೆ.
ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ಗಾಯಗೊಂಡ ಕಾರ್ಮಿಕ ರೂರ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಎಸ್ಪಿ(ಗ್ರಾಮೀಣ) ಸ್ವಪನ್ ಕಿಶೋರ್ ಅವರು ತಿಳಿಸಿದ್ದಾರೆ.
ಗೋಡೆಯ ಅವಶೇಷಗಳಡಿಯಲ್ಲಿ ಸಿಲುಕಿ ಒಂದು ಕುದುರೆ ಸಹ ಮೃತಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಘಟನೆಯ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ಧೀರಜ್ ಸಿಂಗ್ ಗಾರ್ಬಿಯಾಲ್ ಅವರು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ರೂರ್ಕಿಯ ಜಂಟಿ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲಿದ್ದಾರೆ.