ಇದೇ ಧನುರ್ಮಾಸ ಡಿಸೆಂಬರ್ 17ರಂದು ಪ್ರಾರಂಭವಾಗುತ್ತದೆ ಮತ್ತು 2023 ಜನವರಿ 14 ರಂದು ಕೊನೆಗೊಳ್ಳುತ್ತದೆ. ಅಂದರೆ ಮಕರ ಸಂಕ್ರಾಂತಿಯಂದು ಕೊನೆಗೊಳ್ಳುತ್ತದೆ. ಬಹಳಷ್ಟು ಮಂದಿ ಮಾಸ, ದಿನ, ಗಳಿಗೆಯನ್ನು ಲೆಕ್ಕಿಸದೆ ತಮಗೆ ಬೇಕಾದ ಸಮಯದಲ್ಲಿ ಎಲ್ಲಾ ಕೆಲಸಗಳನ್ನು ಪ್ರಾರಂಭಿಸುತ್ತಾರೆ.
*ಶ್ರೀಕೃಷ್ಣನಿಗೆ ಪ್ರಿಯವಾದ ಮಾಸ:*
ಕೃಷ್ಣನ ಪರಮ ಭಕ್ತರಿಗೆ ತುಂಬಾ ಪ್ರಿಯವಾದ ಮಾಸ. ಏಕೆಂದರೆ ಕೃಷ್ಣ ತಿರುಮಲದಲ್ಲಿ ನೆಲೆಸಿರುವ ಶ್ರೀನಿವಾಸ/ವೆಂಕಟೇಶನ ರೂಪದಲ್ಲಿ ಭೂಲೋಕದಲ್ಲಿ ನೆಲೆಸಿದಾಗ ಭೂದೇವಿ-ಆಂಡಾಳ್, ಒಬ್ಬ ಸಾಮಾನ್ಯ ಹುಡುಗಿಯಾಗಿ ಪ್ರತಿದಿನ ತನ್ನ ಪ್ರೀತಿಯ ವೆಂಕಟೇಶನಿಗಾಗಿ ಹೂಮಾಲೆ ಮಾಡಿ ಆ ಮಾಲೆಯನ್ನು ತಾನೇ ಧರಿಸಿಕೊಂಡು ನೋಡಿ, ಅದು ಚನ್ನಾಗಿ ಕಾಣಿಸುತ್ತದೆ ಎಂದ ಮೇಲೆ ವೆಂಕಟೇಶನ ಕೊರಳಿಗೆ ಹಾಕುತ್ತಿದ್ದಳು..
*ಧನುರ್ಮಾಸದ ಮಹತ್ವ:*
ಧನುರ್ಮಾಸದ ಸಮಯದಲ್ಲಿ ಬರುವ ಏಕಾದಶಿಯನ್ನು ಅತ್ಯಂತ ಮಂಗಳಕರವೆಂದು ಭಾವಿಸಲಾಗಿದೆ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಧನುರ್ಮಾಸದಲ್ಲಿ ಚಂದ್ರನ ಬೆಳವಣಿಗೆಯ ಹಂತದಲ್ಲಿ ಬರುವ ವೈಕುಂಠ ಏಕಾದಶಿಯು ಮೋಕ್ಷ ದ್ವಾರಂ ಎಂದೆ ಹೆಸರುವಾಸಿಯಾಗಿದೆ. ಈ ದಿನ ದೇವಾಲಯದ ಏಳು ಬಾಗಿಲುಗಳನ್ನು ಹಾದುಹೋಗಲು ಭಕ್ತರಿಗೆ ಮೋಕ್ಷ ದೊರಕದಂತೆ ಎಂಬ ನಂಬಿಕೆ ಇದೆ. ಧನುರ್ಮಾಸದಲ್ಲಿ ಬೆಳಗಿನಜಾವದಲ್ಲಿ ವಿಷ್ಣುವಿನ ಆರಾಧನೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ವಿಷ್ಣು ಸಹಸ್ರನಾಮವನ್ನು ಪಠಿಸಲಾಗುತ್ತದೆ. ಪಠಿಸುವ ಇತರ ಪ್ರಮುಖ ಮಂತ್ರಗಳು ಲಕ್ಷ್ಮೀ ದೇವಿಗೆ ಸಮರ್ಪಿತವಾಗಿವೆ.. ಧನುರ್ ಸಂಕ್ರಮಣ ಎಂದು ಕರೆಯಲ್ಪಡುವ ಧನುರ್ ರಾಶಿಯಲ್ಲಿ ಸೂರ್ಯನ ಪ್ರವೇಶದಿಂದ ಧನುರ್ಮಾಸದ ಆರಂಭವನ್ನು ಗುರುತಿಸಲಾಗಿದೆ, ಆದ್ದರಿಂದ ಆ ಕಾಲಕ್ಕೆ ಧನುರ್ಮಾಸ ಎಂದು ಹೆಸರು. ಈ ತಿಂಗಳಲ್ಲಿ ಸೂರ್ಯ ಧನುರ್ ರಾಶಿಯನ್ನು ತಿಂಗಳ ಕೊನೆಯಲ್ಲಿ ಮಕರ ರಾಶಿಯನ್ನು ಪ್ರವೇಶಿಸುವವರೆಗೆ ಧನುರ್ಮಾಸ ಇರುತ್ತದೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ, ನಕ್ಷತ್ರಗಳು ಇನ್ನೂ ಹೊಳೆಯುತ್ತಿರುವಾಗಲೇ ದೇಗುಲಗಳಲ್ಲಿ ಮುಂಜಾನೆಯ ಪೂಜೆಯು ಆರಂಭವಾಗಿ, ಸೂರ್ಯೋದಯಕ್ಕಿಂತ ಮುನ್ನವೇ ಮುಕ್ತಾಯವಾಗುವ ಮಾಸವಿದು. ಇದನ್ನು ಧನು ಪೂಜೆ ಎಂದೂ ಕರೆಯುತ್ತಾರೆ.
ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ, ಉತ್ತರಾಯಣವು ಹಗಲಿನ ಕಾಲ, ಆದರೆ ಈ ಧನುರ್ಮಾಸವು ರಾತ್ರಿ ಮತ್ತು ಹಗಲು ಎರಡೂ ಸೇರಿದ ಸಮಯವೆಂದೂ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಯಾರು ಭಗವಂತನನ್ನು ಪೂಜಿಸಿ, ನೈವೇದ್ಯವನ್ನು ಅರ್ಪಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ನೆರವೇರುತ್ತದೆ.
ಡಿಸೆಂಬರ್ ಮಧ್ಯದಿಂದ ಜನವರಿ ಮಧ್ಯದವರೆಗೆ ಬರುವ ಧನುರ್ಮಾಸ, ಧನುರ್ ಮಾಸವನ್ನು ಶೂನ್ಯ ಮಾಸಂ ಅಥವಾ ಕರ್ಮ ಎಂದು ಪರಿಗಣಿಸಲಾಗುತ್ತದೆ. ಧನುರ್ಮಾಸವನ್ನು ಕೆಲವು ಪ್ರದೇಶಗಳಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಕೇವಲ ಪ್ರಾರ್ಥನೆಗಳು ಮತ್ತು ದೈವಿಕ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ. ಯಾವುದೇ ಶುಭ ಸಮಾರಂಭಗಳನ್ನು ಸಹ ಮಾಡುವುದಿಲ್ಲ..
*ಮಾರ್ಗಶೀರ್ಷ ಮಾಸದಲ್ಲಿ ಯಮುನಾ ನದಿ ಸ್ನಾನ:*
ಮಾರ್ಗಶೀರ್ಷ ತಿಂಗಳಲ್ಲಿ, ನದಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಮತ್ತು ಎಲ್ಲಾ ಆಸೆಗಳು ಈಡೇರುತ್ತದೆ. ಮಾರ್ಗಶೀರ್ಷ ಮಾಸದಲ್ಲಿ ಓರ್ವ ವ್ಯಕ್ತಿಯು ಯಮುನಾ ನದಿಯಲ್ಲಿ ಸ್ನಾನ ಮಾಡುವುದರಿಂದ ತನ್ನೆಲ್ಲಾ ಪಾಪಗಳಿಂದ ಮುಕ್ತಿಯನ್ನು ಹೊಂದಬಹುದೆಂದು ಶ್ರೀಕೃಷ್ಣನು ಗೋಪಿಗಳಿಗೆ ಹೇಳಿದ್ದನು. ಇದರ ನಂತರ ಮಾರ್ಗಶೀರ್ಷ ಮಾಸದಲ್ಲಿ ನದಿ ಸ್ನಾನದ ವಿಶೇಷ ಸಂಪ್ರದಾಯ ಆರಂಭವಾಯಿತು.
*ಮಾರ್ಗಶೀರ್ಷದಲ್ಲಿ ವಿಷ್ಣು ಪೂಜೆ*
ಮಾರ್ಗಶೀರ್ಷ ತಿಂಗಳಲ್ಲಿ ಸಾಧ್ಯವಾದಾಗಲೆಲ್ಲಾ, ಯಮುನಾ ನದಿಯಲ್ಲಿ ಒಮ್ಮೆ ಸ್ನಾನ ಮಾಡಿ, ಶ್ರೀಕೃಷ್ಣನನ್ನು ಆರಾಧಿಸಿದರೆ ಅದು ಫಲಪ್ರದವಾಗಿದೆ. ಈ ತಿಂಗಳಲ್ಲಿ ವಿಷ್ಣುವನ್ನು ಪೂಜಿಸಿ. ಅವರಿಗೆ ತುಳಸಿ ಎಲೆಗಳನ್ನು ತ್ಪಪದೇ ಅರ್ಪಿಸಿ. ನಂತರ ಅದನ್ನು ಪ್ರಸಾದ ಎಂದು ತೆಗೆದುಕೊಳ್ಳಿ. ಈ ಪವಿತ್ರ ಮಾರ್ಗಶೀರ್ಷ ತಿಂಗಳಲ್ಲಿ ಶಂಖವನ್ನು ಕೂಡ ಪೂಜಿಸಿ. ಅದರಲ್ಲಿ ಪವಿತ್ರ ನೀರನ್ನು ತುಂಬಿಸಿ ಅದರಿಂದ ಭಗವಾನ್ ಶ್ರೀಕೃಷ್ಣನಿಗೆ ಅಭಿಷೇಕ ಮಾಡಿ. ನಂತರ ಸಂಪೂರ್ಣ ಮನೆಯಲ್ಲಿ ಶಂಖದ ನೀರನ್ನು ಸಿಂಪಡಿಸಿ. ಇದು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಗೆ ಕಾರಣವಾಗುತ್ತದೆ. ಕಾತ್ಯಾಯಿನಿ ವ್ರತ ಭಾಗವತ ಪುರಾಣದಲ್ಲಿ ಧನುರ್ಮಾಸದ ಮುಂಜಾನೆ ಮಾಡುವ ವ್ರತದ ಫಲವು ಭಕ್ತರಿಗೆ ಸರ್ವವಿಧದ ಫಲಗಳನ್ನು ನೀಡುತ್ತದೆ ಎನ್ನುವ ಉಲ್ಲೇಖವಿದೆ. ನಂದಗೋಪನ ಮಗನಾದ ಶ್ರೀಕೃಷ್ಣನನ್ನು ಪತಿಯಾಗಿ ವರಿಸಲು ಗೋಪಿಯರೆಲ್ಲ ಸೇರಿ ಈ ವ್ರತವನ್ನು ಮಾಡುತ್ತಾರೆ. ಅಂತಹ ಪರಮಾತ್ಮನನ್ನೇ ದೊರಕಿಸಿಕೊಡುವ ಪುಣ್ಯ ಮಾಸವಾದ್ದರಿಂದ ಧನು ಮಾಸದಲ್ಲಿ ಶೈವ, ಶ್ರೀವೈಷ್ಣವ, ಶಾಕ್ತರೆಲ್ಲರೂ ದೇಗುಲಗಳಲ್ಲಿ ಧನುರ್ಮಾಸದ ಆಚರಣೆಯನ್ನು ಮಾಡುತ್ತಾರೆ.
*ಧನುರ್ಮಾಸದ ಆಚರಣೆ:*
ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿ ಕರ್ಮಗಳನ್ನು ಮುಗಿಸಬೇಕು. ಸೂರ್ಯೋದಯಕ್ಕಿಂತ ಮೊದಲೇ ದೇವರ ಪೂಜೆ ಮುಗಿಸಬೇಕು. ಆಕಾಶದಲ್ಲಿ ನಕ್ಷತ್ರ ಕಾಣಿಸುವ ಸಮಯದಲ್ಲಿ ಮಾಡಿದ ಪೂಜೆ ಶ್ರೇಷ್ಠ, ನಂತರ ಮಧ್ಯಮ, ಸೂರ್ಯೋದಯದ ನಂತರ ಅಧಮ, ನಿಷ್ಪಲವೆಂದು ಹೇಳಲಾಗುತ್ತದೆ.
* ಪ್ರತಿನಿತ್ಯ ದೇವರಿಗೆ ನೈವೇದ್ಯವಾಗಿ ಮುದ್ಗಾನ್ನ ಅಂದರೆ ಹುಗ್ಗಿಯನ್ನು (ಪೊಂಗಲ್) ಅರ್ಪಿಸಬೇಕು.
* ಶ್ರೀ ವಿಷ್ಣು ಸಹಸ್ರನಾಮ ಪಾರಾಯಣವನ್ನು ಮತ್ತು ತಿರುಪ್ಪಾವೈ (30 ಅಧ್ಯಾಯ) ಪ್ರತಿ ದಿನ ಒಂದು ಅಧ್ಯಾಯ ವನ್ನು ಹೇಳಿಕೊಳ್ಳಬೇಕು. ನಂತರ ನೈವೇದ್ಯವನ್ನು ಅರ್ಪಣೆ ಮಾಡಬೇಕು.