ಬದಿಯಡ್ಕ: ಇತ್ತೀಚೆಗೆ ನಡೆದ ನವಕೇರಳ ಸಮಾವೇಶದಲ್ಲಿ ಪಾಲ್ಗೊಳ್ಳದೇ ಇರುವ ಉದ್ಯೋಗಖಾತರೀ ಯೋಜನೆಯ ಮಹಿಳಾ ಕಾರ್ಮಿಕರ ಮೇಲೆ ಪ್ರತೀಕಾರದ ಕ್ರಮಕೈಗೊಳ್ಳಲು ಮುಂದಾದ ರಾಜ್ಯ ಸರ್ಕಾರದ ಕ್ರಮಕ್ಕೆ ಅವಕಾಶವನ್ನು ನೀಡುವುದಿಲ್ಲ. ಉದ್ಯೋಗಖಾತರಿ ಕೆಲಸಗಾರರು ಮತ್ತು ಕುಟುಂಬಶ್ರೀ ಕಾರ್ಯಕರ್ತರು ಪಿಣರಾಯಿ ಸರ್ಕಾರದ ಗುಲಾಮರಲ್ಲ. ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಭಾಗವಹಿಸದೇ ಇರುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಇದರಲ್ಲಿ ರಾಜ್ಯ ಸರ್ಕಾರವು ತಲೆತೂರಿಸುವುದು ಬಡವರ ಬಡತನವನ್ನು ಶೋಷಣೆ ಮಾಡಿದಂತೆ. ಈ ಹೆಸರಿನಲ್ಲಿ ಒಂದು ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸದ ಕೆಲಸಗಾರರು ಹಾಗೂ ಕುಟುಂಬಶ್ರೀ ಕಾರ್ಯಕರ್ತೆಯರ ವಿರುದ್ಧ ಕ್ರಮ ಕೈಗೊಂಡರೆ ಬಿಜೆಪಿ ಇದರ ವಿರುದ್ಧ ತೀವ್ರ ಹೋರಾಟ ನಡೆಸಲಿದೆ ಎಂದು ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ವಕೀಲ ಕೆ.ಶ್ರೀಕಾಂತ್ ಎಚ್ಚರಿಕೆ ನೀಡಿರುವರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಬದಿಯಡ್ಕ ಪಂಚಾಯಿತಿ ಬಿಜೆಪಿ ಜನಪ್ರತಿನಿಧಿಗಳು ನಡೆಸಿದ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ಬುಡಮೇಲು ಮಾಡುತ್ತಿದೆ ಎಂಬ ಎಡಪಕ್ಷಗಳ ಅಪಪ್ರಚಾರ ನಿರಾಧಾರ. ಎರಡನೇ ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಗೆ ಒಟ್ಟು 1.61 ಲಕ್ಷ ಕೋಟಿ ರೂ. ನೀಡಿದೆ. ಆದರೆ ಮೋದಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ 3.71 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದೆ. ಕೊರೊನಾ ವೈರಸ್‍ನಿಂದ 20-21ರ ಒಂದು ವರ್ಷದಲ್ಲಿ 1.11 ಲಕ್ಷ ಕೋಟಿ ರೂ., ಪ್ರಸಕ್ತ ಹಣಕಾಸು ವರ್ಷಕ್ಕೆ ಕೇರಳಕ್ಕೆ ಅಗತ್ಯವಿರುವ 600 ಲಕ್ಷ ವೇತನ ದಿನಗಳನ್ನು ಮೋದಿ ಸರ್ಕಾರ ಅನುಮೋದಿಸಿದೆ. ಈಗಾಗಲೇ ಕೇರಳದಲ್ಲಿ ವಿವಿಧ ಯೋಜನೆಗಳಿಗಾಗಿ 685.01 ಲಕ್ಷ ಕಾರ್ಮಿಕ ದಿನಗಳನ್ನು ಜಾರಿಗೊಳಿಸಲಾಗಿದೆ. ಆದರೂ ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಅಪಪ್ರಚಾರ ಮುಂದುವರಿದಿದೆ ಎಂದು ಆರೋಪಿಸಿದರು.
ಡಿ.ಶಂಕರ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮಪಂಚಾಯಿತಿ ಕಾರ್ಯದರ್ಶಿಯು ಏಕಪಕ್ಷೀಯ ನಿರ್ಧಾರಗಳ ಮೂಲಕ ಮುಂದುವರಿಯುತ್ತಿರುವುದು ಖಂಡನೀಯ. ಅಗತ್ಯವುಳ್ಳ ಉದ್ಯೋಗಸ್ಥರೂ ಇಲ್ಲದೆ ಪಂಚಾಯಿತಿ ಕಾರ್ಯಗಳ ಸ್ಥಂಭನಾವಸ್ಥೆಯಲ್ಲಿದೆ ಎಂದು ಆರೋಪಿಸಿದರು.
ಬಾಲಕೃಷ್ಣ ಶೆಟ್ಟಿ ಕಡಾರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಭಟ್, ಬದಿಯಡ್ಕ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಮಂಡಲ ಕಾರ್ಯದರ್ಶಿ ಗೋಪಾಲಕೃಷ್ಣ ಮುಂಡೋಳುಮೂಲೆ, ಬಿಜೆಪಿ ಮುಖಂಡ ಅವಿನಾಶ್ ರೈ, ಜನಪ್ರತಿನಿಧಿಗಳಾದ ಅಶ್ವಿನಿ ಕೆ.ಎಂ., ಜಯಂತಿ ಕುಂಟಿಕಾನ, ಶುಭÀಲತಾ ರೈ, ಸ್ವಪ್ನಾ, ಈಶ್ವರ ಮಾಸ್ತರ್ ಪೆರಡಾಲ, ಸೌಮ್ಯಾ ಮಹೇಶ್ ನಿಡುಗಳ, ಅನಿತಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.