ನವದೆಹಲಿ: ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಏರಿಕೆಯ ಬೆನ್ನಲ್ಲೇ ಸಾಂಕ್ರಾಮಿಕದಿಂದಾಗಿ ಅನಾರೋಗ್ಯಕ್ಕೆ ಒಳಗಾಗಿರುವವರ ಮೇಲೆ ನಿಗಾ ಇರಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಲ್ಲದೆ ಕೊರೊನಾ ಹೊಸ ರೂಪಾಂತರಿ ಜೆಎನ್.1ರ ಪತ್ತೆ ಮೇಲೂ ಎಚ್ಚರವಹಿಸಲು ಸೂಚಿಸಿದೆ.
ಭಾರತದಲ್ಲಿ ಹವಾಮಾನದಲ್ಲಿನ ವ್ಯತ್ಯಾಸ, ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಕಾರಣ ಕೋವಿಡ್ ಪರಿಸ್ಥಿತಿಯ ಮೇಲೆ ನಿರಂತರವಾಗಿ ಜಾಗರೂಕತೆಯಿಂದ ಇರುವುದು ಬಹಳ ಮುಖ್ಯ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಸದ್ಯ ಭಾರತದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಕೇರಳದಲ್ಲಿ ಇಂದು ಒಂದು ಸಾವು ಸಂಭವಿಸಿದೆ. ಅದನ್ನು ಹೊರತುಪಡಿಸಿದರೆ 1,828 ಸಕ್ರಿಯ ಪ್ರಕರಣಗಳಿವೆ. ಜೆಎನ್.1 ರೂಪಾಂತರಿ ಇತ್ತೀಚೆಗೆ ಪತ್ತೆಯಾಗಿದೆ ಎಂದು ಸಚಿವಾಲಯ ಹೇಳಿದೆ.
ಹೆಚ್ಚಿನ ಸಂಖ್ಯೆಯಲ್ಲಿ RT-PCR ಪರೀಕ್ಷೆಗಳನ್ನು ಮಾಡುವುದು, ಜೀನೋಮ್ ಅನುಕ್ರಮಕ್ಕಾಗಿ ಪಾಸಿಟಿವ್ ಇರುವ ಮಾದರಿಗಳನ್ನು ಭಾರತೀಯ SARS COV-2 ಜೀನೋಮಿಕ್ಸ್ ಕನ್ಸೋರ್ಟಿಯಮ್ (INSACOG) ಪ್ರಯೋಗಾಲಯಗಳಿಗೆ ಕಳುಹಿಸಿ, ಇದರಿಂದಾಗಿ ದೇಶದಲ್ಲಿ ಹೊಸ ರೂಪಾಂತರಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದು ರಾಜ್ಯಗಳಿಗೆ ಕೇಂದ್ರ ತಿಳಿಸಿದೆ.