ಡೆಹರಾಡೂನ್ : 'ಮೇಡ್ ಇನ್ ಇಂಡಿಯಾ' ರೀತಿಯಲ್ಲೇ 'ವೆಡ್ ಇನ್ ಇಂಡಿಯಾ' (ಭಾರತದಲ್ಲೇ ಮದುವೆಯಾಗಿ) ಆಂದೋಲನದ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಇಲ್ಲಿನ ಎಫ್‌ಆರ್‌ಐನಲ್ಲಿ ಉತ್ತರಾಖಂಡದ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಶ್ರೀಮಂತ ಕೈಗಾರಿಕೋದ್ಯಮಿಗಳು ತಮ್ಮ ಕುಟುಂಬಗಳಲ್ಲಿನ ವಿವಾಹವನ್ನು ಪ್ರತಿ ವರ್ಷ ಉತ್ತರಾಖಂಡದ ಒಂದು ತಾಣದಲ್ಲಿ ನಡೆಸಬೇಕು.
ವಿವಾಹ ತಾಣಗಳಿಗಾಗಿ ವಿದೇಶಕ್ಕೆ ಹೋಗುವುದು ಕೋಟ್ಯಧಿಪತಿ ಮತ್ತು ಶತಕೋಟ್ಯಧಿಪತಿ ಉದ್ಯಮಿಗಳ ಕುಟುಂಬಗಳಲ್ಲಿ ಫ್ಯಾಷನ್ ಆಗಿದೆ. ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬ ಹಳೆಯ ಮಾತಿದೆ. ಆದರೆ, ಯುವ ಜೋಡಿಗಳು ದೇವರ ನಾಡಿಗೆ (ದೇವಭೂಮಿ) ಬರುವ ಬದಲು ತಮ್ಮ ಮದುವೆಗಾಗಿ ವಿದೇಶಕ್ಕೆ ಏಕೆ ಹೋಗುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಮೇಡ್ ಇನ್ ಇಂಡಿಯಾ ಮಾದರಿಯಲ್ಲಿ 'ವೆಡ್ ಇನ್ ಇಂಡಿಯಾ'ದಂತಹ ಆಂದೋಲಕ್ಕೆ ಯುವ ಮತ್ತು ಶ್ರೀಮಂತ ದಂಪತಿಗಳು ಕೈಜೋಡಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ಉತ್ತರಾಖಂಡದಲ್ಲಿ ವಿವಾಹ ತಾಣಗಳನ್ನು ಉತ್ತೇಜಿಸುವ ಆಂದೋಲನ ಆರಂಭವಾಗಿ ಅದು ಐದು ವರ್ಷಗಳವರೆಗೆ ಮುಂದುವರಿದರೆ, ವರ್ಷದಲ್ಲಿ ಇಲ್ಲಿ ಸುಮಾರು ಐದು ಸಾವಿರ ವಿವಾಹಗಳು ನಡೆದರೆ ಇಡೀ ಗುಡ್ಡಗಾಡು ರಾಜ್ಯವು ಅಂತರರಾಷ್ಟ್ರೀಯ ವಿವಾಹ ತಾಣವಾಗಿ ಹೊರಹೊಮ್ಮುತ್ತದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಅವರು ಕಳೆದ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ವಿವಾಹ ತಾಣಕ್ಕಾಗಿ ವಿದೇಶಕ್ಕೆ ಹೋಗುವ ಬದಲು ಸ್ವದೇಶದಲ್ಲೇ ವಿವಾಹಗಳನ್ನು ನಡೆಸುವಂತೆ ಸಿರಿವಂತ ಉದ್ಯಮಿಗಳ ಕುಟುಂಬಗಳಿಗೆ ಕರೆ ನೀಡಿದ್ದರು.