ಟೋಕಿಯೋ: ಜಪಾನ್ ಮೂಲದ ಟೋಕೋ ಹೆಸರಿನ ವ್ಯಕ್ತಿಯೊಬ್ಬ ಬರೋಬ್ಬರಿ 12 ಲಕ್ಷ ರೂ. ಖರ್ಚು ಮಾಡಿ ನಾಯಿಯಂತೆ ರೂಪಾಂತರಗೊಂಡ ಸುದ್ದಿ ನಿಮಗೆಲ್ಲ ತಿಳಿದೇ ಇದೆ. ತಾಜಾ ಸಂಗತಿ ಏನೆಂದರೆ, ರೂಪಾಂತರಗೊಂಡ ಟೋಕೋ ಇದೀಗ ನಿಜವಾದ ನಾಯಿಯನ್ನು ಭೇಟಿಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ.
ವಿಡಿಯೋದಲ್ಲಿ ನಿಜವಾದ ನಾಯಿಯು, ನಾಯಿಯಂತೆ ರೂಪಾಂತರಗೊಂಡ ಟೋಕೋವನ್ನು ನೋಡಿ ಬೊಗಳುತ್ತಿರುವ ದೃಶ್ಯವಿದೆ. ಕೆಲವು ಸೆಕೆಂಡ್ಗಳ ಬಳಿಕ ಟೋಕೋ ಬಾಗುವುದು ಮತ್ತು ನಾಯಿಯ ಕಡೆಗೆ ಬರುವುದನ್ನು ನೋಡಬಹುದು. ಈ ದೃಶ್ಯ ಸ್ನೇಹದ ಹಸ್ತವನ್ನು ಚಾಚುತ್ತಿರುವಂತೆ ತೋರುತ್ತದೆ. ಆದರೆ, ವಿಚಲಿತಗೊಂಡ ನಿಜವಾದ ನಾಯಿ ಟೋಕೋವನ್ನು ಬೊಗಳುತ್ತದೆ. ನೋಡಲು ಈ ದೃಶ್ಯ ತುಂಬಾ ಫನ್ನಿಯಾಗಿದ್ದು, ಅಂತಿಮವಾಗಿ ನಾಯಿಯು ಟೋಕೋವನ್ನು ಬಿಟ್ಟು ಅಲ್ಲಿಂದ ಹೊರಡುತ್ತದೆ.
ವಾಸ್ತವವಾದ ನಾಯಿಯ ವೇಷಭೂಷಣವನ್ನು ನೋಡಿದ ನಾಯಿಯ ಪ್ರತಿಕ್ರಿಯೆ ಎಂದು ವಿಡಿಯೋಗೆ ಶೀರ್ಷಿಕೆಯನ್ನು ನೀಡಲಾಗಿದೆ.
ಇತ್ತೀಚೆಗೆ ಟೋಕೋ ತನ್ನ ಇನ್ಸ್ಟಾಗ್ರಾಂನಲ್ಲಿ ಸರಣಿ ಚಿತ್ರಗಳನ್ನು ಪೋಸ್ಟ್ ಮಾಡಿ, ನಾಯಿಯಂತೆ ಚುರುಕುತನ ಪರೀಕ್ಷೆಯಲ್ಲಿ ವಿಫಲವಾಗಿದ್ದಾಗಿ ಬರೆದುಕೊಂಡಿದ್ದರು. ಫೋಟೋದಲ್ಲಿ ನಾಯಿಯ ವೇಷವನ್ನು ಧರಿಸಿ, ಉದ್ಯಾನದಲ್ಲಿರುವ ತಡೆ ಕಂಬಗಳ ಮೇಲೆ ಜಿಗಿಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಆದರೆ, ನಾಯಿಯಂತೆ ಹಾರಲು ಟೋಕೋಗೆ ಸಾಧ್ಯವಾಗಲಿಲ್ಲ. ನೀವು ನಾಯಿಯಾದಾಗ, ನೀವು ನಾಯಿಯಂತಹ ಚುರುಕುತನವನ್ನು ಪ್ರಯತ್ನಿಸಲು ಬಯಸುತ್ತೀರಿ ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಸಾಕಷ್ಟು ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಟೋಕೋ ಪ್ರಯತ್ನವನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಆತನ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ತಾನು ನಾಯಿಯಂತೆ ಬದುಕಲು ಬಯಸಿರುವುದಾಗಿ ಜನರು ನನ್ನ ಬಗ್ಗೆ ತಪ್ಪು ಮಾಹಿತಿ ಹೊಂದಿದ್ದಾರೆ ಎಂದು ಟೋಕೋ ಹೇಳಿಕೊಂಡಿದ್ದಾರೆ. ತನ್ನ ವೇಷಭೂಷಣದ ಬಗ್ಗೆ ಚರ್ಚಿಸುತ್ತಾ, ವಾರಕ್ಕೊಮ್ಮೆ, ಅದರಲ್ಲೂ ಹೆಚ್ಚಾಗಿ ಮನೆಯಲ್ಲಿ ಶ್ವಾನದ ವೇಷಭೂಷಣವನ್ನು ಧರಿಸುತ್ತೇನೆಂದು ಟೋಕೋ ಹೇಳಿದರು.
ಅಂದಹಾಗೆ ಟೋಕೋ ತನ್ನ ಸಂಪೂರ್ಣ ಪ್ರಯಾಣವನ್ನು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾನೆ. ಆದರೆ, ಅವರಿನ್ನೂ ಸಾರ್ವಜನಿಕವಾಗಿ ತನ್ನ ಗುರುತನ್ನು ಬಹಿರಂಗಪಡಿಸಿಲ್ಲ. ಸದ್ಯ ನಾಯಿಯಂತೆ ರೂಪಾಂತರಗೊಂಡಿರುವ ಆತನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.