ಶಬರಿಮಲೆ: ಆರನ್ಮುಳ ಶ್ರೀ ಪಾರ್ಥಸಾರಥೀ ದೇವಸ್ಥಾನದಿಂದ ಭವ್ಯ ಮೆರವಣಿಗೆ ಮೂಲಕ ಆಗಮಿಸಿದ ಚಿನ್ನದ ಅಂಗಿ(ತಂಗ ಅಂಗಿ)ಯನ್ನು ಮಂಗಳವಾರ ಶ್ರೀ ಅಯ್ಯಪ್ಪಸ್ವಾಮಿ ವಿಗ್ರಹಕ್ಕೆ ತೊಡಿಸಿ ದೀಪಾರಾಧನೆ ನಡೆಸಲಾಯಿತು. ಪರಿಶುದ್ಧ ತಂಗ ಅಂಗಿ ತೊಡಿಸಿ ದೀಪಾರಾಧನೆಯನ್ನು ಸಾವಿರಾರು ಮಂದಿ ಭಕ್ತಾದಿಗಳು ಕಣ್ತುಂಬಿಕೊಂಡರು.
ಡಿ. 23ರಂದು ಆರನ್ಮುಳ ಶ್ರೀ ಪಾರ್ಥಸಾರಥೀ ದೇವಸ್ಥಾನದಿಂದ ತಂಗಂಗಿ ಭವ್ಯಶೋಭಾಯಾತ್ರೆ ಆರಂಭಗೊಂಡಿತ್ತು. ಪಂಪೆಯ ಶ್ರೀ ಗಣಪತಿ ದೇವಸ್ಥಾನದಲ್ಲಿ ಭಕ್ತಾದಿಗಳ ದರ್ಶನಕ್ಕಿರಿಸಿದ ನಂತರ ನೀಲಿಮಲೆ, ಅಪ್ಪಾಚಿಮೇಡು, ಶಬರಿಪೀಠ ಹಾದಿಯಾಗಿ ಶರಂಗುತ್ತಿ ತಲುಪಿದ ತಂಗಅಂಗಿ ಪೆಟ್ಟಿಗೆಯನ್ನು ದೇವಸ್ವಂ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸನ್ನಿದಾನಕ್ಕೆ ತಲುಪಿಸಲಾಗಿತ್ತು. ದೇವಸ್ಥಾನದ ತಂತ್ರಿವರ್ಯರು ಹಾಗೂ ಮುಖ್ಯ ಅರ್ಚಕರು ಪಡೆದು, ಗರ್ಭಗುಡಿಗೆ ಕೊಂಡೊಯ್ದು ಶ್ರೀದೇವರಿಗೆ ತೊಡಿಸಿದ ನಂತರ ದೀಪಾರಾಧನೆ ನಡೆಸಲಾಯಿತು. 27ರಂದು ಬೆಳಗ್ಗೆ 10.30ಕ್ಕೆ ಮಂಡಲಪೂಜಾ ಮಹೋತ್ಸವ ನಡೆಯುವುದು. ಮಂಡಲಪೂಜಾ ಮಹೋತ್ಸವ ಸಂದರ್ಭ ಭಕ್ತಾದಿಗಳ ದಟ್ಟಣೆ ನಿಯಂತ್ರಣಕ್ಕೆ 500ರಷ್ಟು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಡಲ ಪೂಜೆ ನಂತರ ರಾತ್ರಿ 11ಕ್ಕೆ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. ನಂತರ ಮಕರಸಂಕ್ರಮಣ ಮಹೋತ್ಸವಕ್ಕಾಗಿ ಡಿ. 30ರಂದು ಗರ್ಭಗುಡಿ ಬಾಗಿಲು ತೆರೆಯಲಾಗುವುದು.