ಹೈದರಾಬಾದ್: ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಎ. ರೇವಂತ್ ರೆಡ್ಡಿ ಅವರು ಗುರುವಾರ ಮಧ್ಯಾಹ್ನ 1.04ಕ್ಕೆ ಎಲ್.ಬಿ. ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವರು.
ರಾಜ್ಯದ ಮುಖ್ಯ ಕಾರ್ಯದರ್ಶಿ ಎ. ಶಾಂತಿ ಕುಮಾರಿ ಅವರು ಸಮಾರಂಭದ ಸಿದ್ಧತೆ ಕುರಿತು ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದರು. ಕ್ರೀಡಾಂಗಣಕ್ಕೂ ಭೇಟಿ ನೀಡಿ ಪರಿಶೀಲಿಸಿದರು.
ಈ ಮಧ್ಯೆ, ರೇವಂತ್ ರೆಡ್ಡಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತಿತರರನ್ನು ದೆಹಲಿಯಲ್ಲಿ ಭೇಟಿ ಮಾಡಿದರು.
ಸಮಾರಂಭದಲ್ಲಿ ಸೋನಿಯಾ ಗಾಂಧಿ ಅವರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕಾಗಿ ಹೈದರಾಬಾದ್‌ಗೆ ತೆರುಳುವಿರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸೋನಿಯಾ ಅವರು 'ಬಹುಶಃ' ಎಂದು ಉತ್ತರಿಸಿದ್ದಾರೆ.
ತೆಲಂಗಾಣದ ಮುಖ್ಯಮಂತ್ರಿಯಾಗಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ರೇವಂತ್ ರೆಡ್ಡಿ ಅವರನ್ನು ಗುರುವಾರ ನೇಮಕ ಮಾಡಲಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 119 ಸ್ಥಾನಗಳ ಪೈಕಿ ಕಾಂಗ್ರೆಸ್ 64 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಪಕ್ಷವು ಸಿಪಿಐನೊಂದಿಗೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿದ್ದು ಈ ಪಕ್ಷ ಒಂದು ಸ್ಥಾನ ಗಳಿಸಿದೆ.
ತೆಲಂಗಾಣ: ಈಗ ಸಂಪುಟ ರಚನೆಯತ್ತ ಗಮನ
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಎ. ರೇವಂತ್ ರೆಡ್ಡಿ ಅವರು ಗುರುವಾರ ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ತ್ವರಿತ ಸಿದ್ಧತೆಗಳು ನಡೆಯುತ್ತಿರುವಂತೆಯೇ, ಕಾಂಗ್ರೆಸ್‌ನಲ್ಲಿನ ಅನೇಕರು ಸಂಪುಟದಲ್ಲಿ ತಮಗೆ ಸ್ಥಾನ ಸಿಗಬಹುದೆಂಬ ಆಶಾಭಾವ ಹೊಂದಿದ್ದಾರೆ.
ನಿಯಮಾವಳಿ ಪ್ರಕಾರ ಮುಖ್ಯಮಂತ್ರಿ ಸೇರಿದಂತೆ 18 ಸದಸ್ಯರು ರಾಜ್ಯ ಸಂಪುಟದ ಭಾಗವಾಗಬಹುದು. ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಈಗ ಎಲ್ಲರ ಗಮನ ಸಂಪುಟ ರಚನೆಯತ್ತ ತಿರುಗಿದೆ. ರೇವಂತ್ ರೆಡ್ಡಿ ಅವರ ಸಂಪುಟದಲ್ಲಿ ಭಾಗಿಯಾಗಲು ಹಲವು ಮಂದಿ ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ.
ಮಲ್ಲು ಭಟ್ಟಿ ವಿಕ್ರಮಾರ್ಕ ಅವರೊಂದಿಗೆ ಮಹಿಳಾ ಶಾಸಕಿಯನ್ನು ಕೂಡ ಉಪ ಮುಖ್ಯಮಂತ್ರಿಯಾಗಿ ನೇಮಿಸಲಾಗುತ್ತದೆ ಎನ್ನಲಾಗಿದೆ. ಇಬ್ಬರು ಉಪ ಮುಖ್ಯಮಂತ್ರಿಗಳ ಸ್ಥಾನಗಳಿಗೆ ಎಐಸಿಸಿ ನಾಯಕರು ಒಪ್ಪಿಗೆ ನೀಡಿದರೆ ಮುಲುಗು ಶಾಸಕಿ, ಧನಸರಿ ಅನಸೂಯ ಅಲಿಯಾಸ್ ಸೀತಕ್ಕ (ಎಸ್‌ಟಿ ಮಹಿಳೆ) ಅಥವಾ ಕೊಂಡಾ ಸುರೇಖಾ (ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆ) ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಏಳು ಬಾರಿ ಶಾಸಕರಾಗಿರುವ ಎನ್. ಉತ್ತಮ್ ಕುಮಾರ್ ರೆಡ್ಡಿ ಅವರು ಸಂಪುಟ ಸೇರುವ ಬಗ್ಗೆ ಉತ್ಸಾಹ ತೋರಿಲ್ಲ. ಅವರ ಪತ್ನಿ ಪದ್ಮಾವತಿ ಅವರು ಸಂಪುಟಕ್ಕೆ ಸೇರ್ಪಡೆಯಾಗಬಹುದು. ಸಂಪುಟ ದರ್ಜೆ ಸಚಿವರಾಗುವ ಆಕಾಂಕ್ಷಿಗಳ ಪಟ್ಟಿಯಲ್ಲಿ ಕಾಂಗ್ರೆಸ್‌ನಲ್ಲಿರುವ ಕಮ್ಮ ಸಮುದಾಯದ ಏಕೈಕ ಶಾಸಕ ತುಮ್ಮಲ ನಾಗೇಶ್ವರ ರಾವ್ ಮತ್ತು ಪಿ. ಶ್ರೀನಿವಾಸ್ ರೆಡ್ಡಿ ಅವರು ಮುಂಚೂಣಿಯಲ್ಲಿದ್ದಾರೆ. ವೈ. ರಾಜಶೇಖರ್ ರೆಡ್ಡಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ದಾಮೋದರ್ ರಾಜಾ ನರಸಿಂಹ ಅವರು ಕೂಡ ಸಂಪುಟಕ್ಕೆ ಸೇರುವ ವಿಶ್ವಾಸ ಹೊಂದಿದ್ದಾರೆ. ಶಾಸಕ ಪೊನ್ನಾಮ್ ಪ್ರಭಾಕರ್ ಅವರೂ ಸಂಪುಟ ಸೇರಬಯಸಿದ್ದಾರೆ.
ರೇಮಂತ್ ರೆಡ್ಡಿ ನಿಷ್ಠರಾಗಿರುವ ಶಬ್ಬೀರ್ ಅಲಿ ಅವರು ನಿಜಾಮಬಾದ್ ನಗರ ಕ್ಷೇತ್ರದಲ್ಲಿ ಸೋತಿದ್ದಾರೆ. ಆದರೆ ಅವರು ಕೂಡ ಖಾತೆ ಪಡೆಯಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ. ಅಲಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅವರನ್ನು ವಿಧಾನಪರಿಷತ್ ಸದಸ್ಯರಾಗಿಸಬೇಕಾಗುತ್ತದೆ.
ವೆಂಕಟರೆಡ್ಡಿ ಅವರು ಪ್ರಮುಖ ಖಾತೆ ಪಡೆಯಲು ಪ್ರಯತ್ನ ನಡೆಸಿದ್ದಾರೆ. ದುಡ್ಡಿಳ್ಳ ಶ್ರೀಧರ ಬಾಬು ಅವರು ಸ್ಪೀಕರ್ ಸ್ಥಾನ ಅಥವಾ ಸಂಪುಟ ದರ್ಜೆ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಸಚಿವರಾಗಿದ್ದ ಗಡ್ಡಂ ವಿನೋದ್ ಕೂಡ ಸಂಪುಟ ಸೇರಲು ಪ್ರಯತ್ನಿಸಿದ್ದು ಈಗಾಗಲೇ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಗಡ್ಡಂ ವಿನೋದ್ ಅವರ ತಮ್ಮ ಗಡ್ಡಂ ವಿವೇಕಾನಂದ ಕೂಡ ಸ್ಪರ್ಧೆಯಲ್ಲಿದ್ದಾರೆ. ಚುನಾವಣೆ ಮುನ್ನವಷ್ಟೇ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರಿದ ಅವರು ಸಂಪುಟ ದರ್ಜೆ ಪಡೆಯುವ ವಿಶ್ವಾಸ ಹೊಂದಿದ್ದಾರೆ. ಪಕ್ಷವು ಅಧಿಕಾರಕ್ಕೆ ಬಂದರೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡುವ ಭರವಸೆಯನ್ನು ಹೈಕಮಾಂಡ್ ನೀಡಿದ ನಂತರವೇ ಅವರು ಕಾಂಗ್ರೆಸ್‌ಗೆ ಮರಳಿದ್ದರು. ವಿವೇಕ್ ಅವರು ಚೆನ್ನೂರ್ ಕ್ಷೇತ್ರದಿಂದ ಜಯ ಗಳಿಸಿದ್ದಾರೆ. ಕುಟುಂಬದಲ್ಲಿ ಒಬ್ಬರು ಮಾತ್ರ ಸಚಿವರಾಗುವ ಅವಕಾಶ ಇದ್ದು ದಲಿತ ಸಮುದಾಯದ ಪ್ರಾತಿನಿಧ್ಯದಡಿ ಗಡ್ಡಂ ಸೋದರರಲ್ಲಿ ಒಬ್ಬರಿಗೆ ಸಂಪುಟದಲ್ಲಿ ಸ್ಥಾನ ದೊರಕುವ ಸಾಧ್ಯತೆ ಇದೆ.