ನವದೆಹಲಿ: ತಮ್ಮ 'ಉತ್ತರ-ದಕ್ಷಿಣ ವಿಭಜನೆ' ಹೇಳಿಕೆಗೆ ಡಿಎಂಕೆ ಸಂಸದ ಡಿ ಎನ್ ವಿ ಸೆಂಥಿಲ್ ಕುಮಾರ್ ಲೋಕಸಭೆಯಲ್ಲಿ ಬುಧವಾರ ವಿಷಾದ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಸೆಂಥಿಲ್ ಕುಮಾರ್ ಅವರು ಹಿಂದಿ ಭಾಷಿಕರ ರಾಜ್ಯದ ಬಗ್ಗೆ ವಿವರಿಸುವಾಗ ಅವಹೇಳನಕಾರಿ ಪದ ಬಳಸಿದ್ದರು.
ಅದು ಸದನದಲ್ಲಿ ತೀವ್ರ ಗದ್ದಲ ಮತ್ತು ಕೋಲಾಹಲಕ್ಕೆ ಕಾರಣವಾಗಿ ಕಲಾಪ ಮುಂದೂಡಿಕೆಗೆ ಕಾರಣವಾಗಿತ್ತು. ಸ್ಪೀಕರ್ ಓಂ ಬಿರ್ಲಾ ಅವರು ಕಡತದಿಂದ ಪದವನ್ನು ತೆಗೆದುಹಾಕಿದ್ದರು.
ಬುಧವಾರ ಬೆಳಗ್ಗೆ ಸದನದಲ್ಲಿ ಕಲಾಪ ಆರಂಭವಾದಾಗ ಆಡಳಿತಾರೂಢ ಬಿಜೆಪಿ ಸಂಸದರು ಈ ವಿಷಯದ ಬಗ್ಗೆ ಪ್ರಸ್ತಾಪಿಸಿ ಮತ್ತೆ ಗದ್ದಲ ಸೃಷ್ಟಿಸಿದರು. ಇಂದು ಪ್ರಶ್ನೋತ್ತರ ಅವಧಿಯಲ್ಲಿ ಸದನವು ಅಲ್ಪ ಕಾಲ ಈ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು.
ನಂತರ ಇಂದು ಮಧ್ಯಾಹ್ನ ಶೂನ್ಯವೇಳೆಗೆ ಸದನ ಮತ್ತೆ ಸಭೆ ಸೇರಿದಾಗ, ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಈ ವಿಷಯವನ್ನು ಪ್ರಸ್ತಾಪಿಸಿದರು. ಇಂತಹ ಮಾತುಗಳನ್ನು ಡಿಎಂಕೆ ನಾಯಕ ಟಿಆರ್ ಬಾಲು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿದರು ಮತ್ತು ಕ್ಷಮೆಯಾಚಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸೆಂಥಿಲ್ ಅವರ ಹೇಳಿಕೆಯನ್ನು ಬೆಂಬಲಿಸಿ ಟಿ.ಆರ್.ಬಾಲು ಅವರ ಜೊತೆ ನಿಂತಿದ್ದಾರಾ?, ರಾಹುಲ್ ಗಾಂಧಿ ಅವರ ಜೊತೆ ನಿಂತಿದ್ದಾರಾ?, ಮತದಾರರು ಮೂರು ರಾಜ್ಯಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ, ಇದನ್ನೇ ಅವರು ಹೇಳುತ್ತಿದ್ದಾರೆ. ಇದು ಭಾರತವನ್ನು ಉತ್ತರ ಮತ್ತು ದಕ್ಷಿಣ ಎಂದು ವಿಭಜಿಸುವ ಚಿಂತನೆಯಾಗಿದೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಕ್ಷೇಪಿಸಿದರು.
ತಮಿಳುನಾಡಿನಲ್ಲಿ ಮಿಚಾಂಗ್ ಚಂಡಮಾರುತದಿಂದ ಉಂಟಾದ ಪ್ರವಾಹದ ವಿಷಯವನ್ನು ಪ್ರಸ್ತಾಪಿಸಿದ ಟಿ ಆರ್ ಬಾಲು ಅವರು ಇದನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಿಸಬೇಕೆಂದು ಒತ್ತಾಯಿಸಿ ಕುಮಾರ್ ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಸೆಂಥಿಲ್ ಕುಮಾರ್ ನೀಡಿರುವ ಹೇಳಿಕೆ ಸರಿಯಲ್ಲ, ಎಂಕೆ ಸ್ಟಾಲಿನ್ ಅವರು ಈಗಾಗಲೇ ಸೆಂಥಿಲ್ ಕುಮಾರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಬಾಲು ಹೇಳಿದರು.
ಇದಾದ ನಂತರ, ಸೆಂಥಿಲ್ ಕುಮಾರ್ ತಾವಾಡಿದ ಮಾತಿಗೆ ವಿಷಾದ ವ್ಯಕ್ತಪಡಿಸಿದರು. ನಾನು "ಅಚಾತುರ್ಯದಿಂದ" ಆ ಪದ ಬಳಕೆ ಮಾಡಿದೆ, ಜನರ ಭಾವನೆಗಳಿಗೆ ಧಕ್ಕೆಯುಂಟಾಗಿದ್ದರೆ ಕ್ಷಮೆ ಕೇಳಿ ಅದನ್ನು ಹಿಂಪಡೆಯುತ್ತೇನೆ ಎಂದು ಹೇಳಿದರು.
"ಇತ್ತೀಚಿನ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಕುರಿತು ಮಾತನಾಡುವಾಗ ನಾನು ಅನುಚಿತ ರೀತಿಯಲ್ಲಿ ಪದವನ್ನು ಬಳಸಿದ್ದೇನೆ. ಬೇರಾವುದೇ ಉದ್ದೇಶದಿಂದ ಆ ಪದವನ್ನು ಬಳಸಿಲ್ಲ, ಇದರಿಂದ ಜನತೆಗೆ ತಪ್ಪು ಸಂದೇಶ ರವಾನೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಟ್ವಟ್ಟರ್ ನಲ್ಲಿ ಕೂಡ ಕ್ಷಮೆ ಕೇಳಿದ್ದರು.
ದೇಶವನ್ನು ಉತ್ತರ-ದಕ್ಷಿಣ ಎಂದು ವಿಭಜಿಸಬೇಡಿ: ಉತ್ತರ ಮತ್ತು ದಕ್ಷಿಣ ಭಾರತವನ್ನು ಆಧರಿಸಿ ದೇಶವನ್ನು ವಿಭಜಿಸಬೇಡಿ ಎಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಬುಧವಾರ ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿರೋಧ ಪಕ್ಷದವರನ್ನು ಕೇಳಿಕೊಂಡರು.
ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ತಮ್ಮ ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಗೋಯಲ್, ಪ್ರಧಾನಿ ನರೇಂದ್ರ ಮೋದಿ ಅವರು 'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ಎಂಬ ಕಲ್ಪನೆಯನ್ನು ತಂದಿದ್ದಾರೆ, ಇದರಿಂದಾಗಿ ಇಡೀ ದೇಶವನ್ನು ಒಂದುಗೂಡಿಸಬಹುದು. ಸಬ್ಸಿಡಿ ಆಹಾರಧಾನ್ಯವನ್ನು ಎಲ್ಲಿ ಬೇಕಾದರೂ ಪಡೆಯುವ ಏಕೈಕ ಪಾರದರ್ಶಕ ವ್ಯವಸ್ಥೆಯಿದು.
"ಪ್ರಧಾನ ಮಂತ್ರಿಗಳು ಯಾವಾಗಲೂ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಾರೆ. ಆದರೆ ಪ್ರತಿಪಕ್ಷಗಳು ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಕೆಲವರು ಉತ್ತರ ಮತ್ತು ದಕ್ಷಿಣ ಭಾರತದ ಬಗ್ಗೆಯೂ ಮಾತನಾಡಿದ್ದಾರೆ. ದಯವಿಟ್ಟು ದೇಶವನ್ನು ಭಾಷೆಯ ಆಧಾರದ ಮೇಲೆ ವಿಭಜಿಸುವ ಪ್ರಯತ್ನ ನಿಲ್ಲಿಸಿ" ಎಂದು ಮನವಿ ಮಾಡಿಕೊಂಡರು.