ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬ್ರಿಟಿಷ್ ಕಾಲದ ಹಳೆಯ ಮೂರು ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಮಸೂದೆಗಳನ್ನು ಮಂಗಳವಾರ ಹಿಂಪಡೆದಿದ್ದು, ಹೊಸ ಕರಡು ವಿಧೇಯಕಗಳನ್ನು ಮಂಡಿಸಿದ್ದಾರೆ.
ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳ ನಂತರ ಕೇಂದ್ರ ಸರ್ಕಾರ ಈ ಹಿಂದೆ ಲೋಕಸಭೆಯಲ್ಲಿ ಮಂಡಿಸಿದ್ದ ಕ್ರಿಮಿನಲ್ ಪ್ರೊಸೀಜರ್ ಕೋಡ್- 1898, ಭಾರತೀಯ ದಂಡ ಸಂಹಿತೆ- 1860, ಇಂಡಿಯನ್ ಎವಿಡೆನ್ಸ್ ಆಕ್ಟ್- 1872 ಒಳಗೊಂಡ ಮಸೂದೆಗಳನ್ನು ಹಿಂಪಡೆಯಲಾಗಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಮುಂಗಾರು ಅಧಿವೇಶನದ ವೇಳೆ ಈ ಮೂರು ವಿಧೇಯಕಗಳನ್ನು ಮಂಡಿಸಲಾಗಿತ್ತು. ಆದರೆ ಅವುಗಳಿಗೆ ಸಂಸದೀಯ ಸ್ಥಾಯಿ ಸಮಿತಿ ಕೆಲವು ಬದಲಾವಣೆಗಳನ್ನು ಶಿಫಾರಸು ಮಾಡಿತ್ತು. ಹೀಗಾಗಿ ಇಂದು ಆ ಶಿಫಾರಸುಗಳನ್ನು ಒಳಗೊಂಡಿರುವ ಹೊಸ ಕರಡು ವಿಧೇಯಕಗಳನ್ನು ಮಂಡಿಸಿದರು.
ಡಿಸೆಂಬರ್ 11 ರಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ಕ್ರಿಮಿನಲ್ ಕಾನೂನು ಮಸೂದೆಗಳನ್ನು ಹಿಂಪಡೆಯಲಾಗುವುದು ಮತ್ತು ಸಂಸದೀಯ ಸಮಿತಿ ಶಿಫಾರಸು ಮಾಡಿದಿ ತಿದ್ದುಪಡಿಗಳನ್ನು ಒಳಗೊಂಡಿರುವ ಮೂರು ಹೊಸ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದು ಹೇಳಿದ್ದರು.
ಲೋಕಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಗೃಹ ಸಚಿವಾಲಯ, ಸಂಸದೀಯ ಸಮಿತಿಯ ಶಿಫಾರಸುಗಳನ್ನು ಅಳವಡಿಸಲು ಹಲವಾರು ತಿದ್ದುಪಡಿಗಳನ್ನು ತರುವ ಬದಲು, ಬದಲಾವಣೆಗಳನ್ನು ಒಳಗೊಂಡಿರುವ ಹೊಸ ಮಸೂದೆಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ ಎಂದರು.