ಕೋಲ್ಕತ್ತ: ರಾಜ್ಯಕ್ಕೆ ಬರಬೇಕಾದ ಸುಮಾರು ₹1.15 ಲಕ್ಷ ಕೋಟಿ ಹಣವನ್ನು ಕೇಂದ್ರ ಬಾಕಿ ಉಳಿಸಿಕೊಂಡಿದೆ ಎಂದು ಹೇಳಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ಹಣ ಬಿಡುಗಡೆ ಮಾಡಿ ಇಲ್ಲವೆ ಅಧಿಕಾರದಿಂದ ಕೆಳಗಿಳಿಯಿರಿ' ಎಂದಿದ್ದಾರೆ. 'ಬಾಕಿ ಹಣ ಬಿಡುಗಡೆ ಮಾಡುವಂತೆ ನಾನು ಮನವಿ ಮಾಡುತ್ತೇನೆ. ಬಿಡುಗಡೆ ಮಾಡದೇ ಹೋದಲ್ಲಿ 'ಬಡವರ ಹಣ ಕೊಡಿ, ಇಲ್ಲ ಕುರ್ಚಿ ಬಿಟ್ಟು ತೆರಳಿ' ಎಂಬ ಘೋಷಣೆ ಕೂಗಬೇಕಾಗುತ್ತದೆ' ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
'ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಒತ್ತಡ ಹೇರುವ ಸಲುವಾಗಿ ಕೆಲ ಸಚಿವರೊಂದಿಗೆ ದೆಹಲಿಗೆ ತೆರಳಲಿದ್ದೇನೆ. ಪ್ರಧಾನಿ ಅವರ ಭೇಟಿಗೆ ಸಮಯಾವಕಾಶ ನೀಡುವಂತೆಯೂ ಕೇಳಿದ್ದೇನೆ. ಡಿಸೆಂಬರ್ 18-20ರ ನಡುವೆ ಭೇಟಿ ಮಾಡಬಹುದು' ಎಂದರು.
'ಬಿಜೆಪಿಯವರ ಹಾಗೆ ನಾನು ಜನರಿಗೆ ಸುಳ್ಳು ಭರವಸೆ ನೀಡುವುದಿಲ್ಲ. ಮುಚ್ಚಿದ ಎಲ್ಲ ಚಹಾ ತೋಟಗಳನ್ನು ಮತ್ತೆ ತೆರೆಯಲಾಗುವುದು ಎಂದು ಬಿಜೆಪಿ ಜನರಿಗೆ ಸುಳ್ಳು ಹೇಳಿದೆ. ಬಾಕಿ ಹಣ ಬಿಡುಗಡೆ ಮಾಡಿದ್ದರೆ ಮತ್ತಷ್ಟು ಜನಪರ ಯೋಜನೆಗಳನ್ನು ತರಲು ಸಾಧ್ಯವಾಗುತ್ತಿತ್ತು' ಎಂದು ಹೇಳಿದರು.