ನವದೆಹಲಿ: ತನ್ನ ಪ್ರಜೆಗಳನ್ನು ವಿಮರ್ಶಾತ್ಮಕವಾಗಿ ಯೋಚಿಸಲು, ಅಧಿಕಾರದಲ್ಲಿರುವವನ್ನು ಪ್ರಶ್ನಿಸಲು ಮತ್ತು ಸಂಘರ್ಷಾತ್ಮಕವಲ್ಲದ ಪ್ರಜಾಸತ್ತಾತ್ಮಕ ಸಂವಾದದಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸದ ಸಮಾಜವು ಪ್ರಗತಿ ಸಾಧಿಸಲು ವಿಫಲವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟರು.
ಡೆಹ್ರಾಡೂನ್‌ನ ಫಾರೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಶನಿವಾರ ಆಯೋಜಿಸಿದ್ದ ಜಸ್ಟೀಸ್ ಕೇಶವ್ ಚಂದ್ರ ಧೂಲಿಯಾ ಪ್ರಬಂಧ ಸ್ಪರ್ಧೆಯಲ್ಲಿ 'ಪ್ರಜಾಪ್ರಭುತ್ವ, ಸಂವಾದ ಮತ್ತು ಭಿನ್ನಮತ' ವಿಷಯದಲ್ಲಿ ಮಾತನಾಡಿದ ಅವರು, 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಸಂಖ್ಯಾತರು ಹೇಳಿದ್ದೇ ನಡೆಯುತ್ತದೆ. ಆದರೂ ಅಲ್ಪಸಂಖ್ಯಾತರ ಮಾತನ್ನೂ ಕೇಳಬೇಕಾಗುತ್ತದೆ' ಎಂದು ಪ್ರತಿಪಾದಿಸಿದರು.
'ಸಮಾಜದಲ್ಲಿ ಜನರ ನಡುವೆ ಸಾಮರಸ್ಯ ಇರಬೇಕಾದುದು ಪ್ರಜಾಪ್ರಭುತ್ವ ವ್ಯವಸ್ಥೆಯ ಪೂರ್ವ ಅಗತ್ಯತೆಯಾದರೂ, ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಹಕ್ಕನ್ನು ಕಸಿದುಕೊಂಡು ಸಾಮರಸ್ಯ ಸೃಷ್ಟಿಸಲು ಸಾಧ್ಯವಿಲ್ಲ. ಒಂದು ಸಮಾಜವು ಅಲ್ಲಿರುವ ಭಿನ್ನಮತೀಯರಿಂದಲೇ ಗುರುತಿಸಲ್ಪಡುತ್ತದೆ ಹಾಗೂ ಪ್ರಜಾಪ್ರಭುತ್ವವು ಸಾಗುತ್ತಿರುವ ದಿಕ್ಕನ್ನು ನಮಗೆ ಭಿನ್ನಮತೀಯರೇ ತಿಳಿಸಿಕೊಡುತ್ತಾರೆ' ಎಂದರು.
ದುರ್ಬಲರ ಪರ ಇರಬೇಕು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಹಿಂಜರಿಕೆ ಮುಕ್ತರಾಗಿ ಇರಬೇಕಾದರೆ, ಅಧಿಕಾರದಲ್ಲಿರುವವರು ಜನಸಂಖ್ಯೆಯಲ್ಲಿ ಮತ್ತು ಸಾಮಾಜಿಕವಾಗಿ ದುರ್ಬಲರಾಗಿರುವ ವರ್ಗದ ಪರ ಇರಬೇಕು ಎಂದು ಸಲಹೆ ನೀಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯು ಕೇವಲ ಬಹುಸಂಖ್ಯಾತರ ಪ್ರಾಶಸ್ತ್ಯಗಳಿಗೆ ಮನ್ನಣೆ ನೀಡುವುದಕ್ಕಿಂತ ಹೆಚ್ಚಾಗಿ, ತನ್ನ ಎಲ್ಲಾ ಭಾಗೀದಾರರ ಜತೆ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.