ಕಣ್ಣೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಜನವರಿ 22, 2024ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಪವಿತ್ರ ರಾಮಮಂದಿರಕ್ಕೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಬೇಕೆಂದು ಭಕ್ತರು ಒಂದಲ್ಲಾ ರೂಪದಲ್ಲಿ ತಮ್ಮ ಕೈಲಾದದಷ್ಟು ಕಾಣಿಕೆಯನ್ನು ನೀಡುತ್ತಿದ್ದಾರೆ.
ಆದರೆ, ವಿಪಕ್ಷಗಳ ನಾಯಕರು ರಾಮಮಂದಿರದ ಬಗ್ಗೆ ಹೇಳಿಕೆಗಳನ್ನು ನೀಡುವ ಮೂಲಕ ವಿವಾದಕ್ಕೆ ಗುರಿಯಾಗುತ್ತಿದ್ದಾರೆ. ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡ ಬಳಿಕ ಇದೀಗ ಸಿಪಿಐ(ಎಂ) ವಕ್ತಾರ ಸೀತಾರಾಮ್ ಯಚೂರಿ ರಾಮಮಂದಿರ ಉದ್ಘಾಟನೆ ವಿಚಾರವಾಗಿ ಹೇಳಿಕೆ ನೀಡಿದ್ದು, ಬಿಜೆಪಿಗರ ಕಣ್ಣು ಕೆಂಪಗಾಗಿಸಿದೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುತ್ತಿರುವುದು ರಾಜಕೀಯ ಲಾಭಕ್ಕಾಗಿ ಹೊರತು ಇಲ್ಲಿ ಬೇರೆ ಉದ್ದೇಶ ಇಲ್ಲ. ರಾಮಮಂದಿರ ಉದ್ಘಾಟನೆಯು ಧಾರ್ಮಿಕ ಭಾವನೆಗಳ ಸಂಪೂರ್ಣ ದುರ್ಬಳಕೆಯಾಗಿದೆ. ಸಂವಿಧಾನವು ಜಾತ್ಯತೀತತೆಯನ್ನು ರಾಜಕೀಯ ಮತ್ತು ರಾಜ್ಯದಿಂದ ಧರ್ಮವನ್ನು ಬೇರ್ಪಡಿಸುವುದು ಎಂದು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ.
ದೇವಾಲಯದ ಉದ್ಘಾಟನೆಯು ಧರ್ಮ ರಾಜಕಾರಣವನ್ನು ಎತ್ತಿ ಹಿಡಿಯುತ್ತಿದೆ. ಇದು ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದೆ. ಇದು ಜನರ ಧಾರ್ಮಿಕ ಭಾವನೆಗಳ ಸಂಪೂರ್ಣ ದುರುಪಯೋಗವಾಗಿದೆ. ಇದು ಸಂವಿಧಾನ ಅಥವಾ ಸುಪ್ರೀಂ ಕೋರ್ಟ್ ತೀರ್ಪಿಗೆ ಹೊಂದಿಕೆಯಾಗದ ಧರ್ಮದ ಬಹಿರಂಗ ರಾಜಕೀಯವಾಗಿದೆ. ನೀವು ಮೃದು ಹಿಂದುತ್ವ ಪಾಲಿಸುವುದರಿಂದ ಈ ರೀತಿಯ ಧಾರ್ಮಿಕ ಮೂಲಭೂತವಾದವನ್ನು ಎದುರಿಸಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ವಕ್ತಾರ ಸೀತಾರಾಮ್ ಯಚೂರಿ ಕಿಡಿಕಾರಿದ್ದಾರೆ.