HEALTH TIPS

ಮಧುಮೇಹದಲ್ಲಿ ಆಹಾರ ಪದ್ಧತಿ ಹೇಗಿರಬೇಕು?

 ಭಾರತದಲ್ಲಿ ಹತ್ತು ಕೋಟಿಗೂ ಹೆಚ್ಚು ಮಂದಿ ಮಧುಮೇಹಿಗಳಿದ್ದಾರೆ. ಇವರ ಜೊತೆಗೆ ಸುಮಾರು ಹದಿಮೂರು ಕೋಟಿ ಮಂದಿ ಮಧುಮೇಹಿಗಳಾಗುವ ನಿಟ್ಟಿನಲ್ಲಿ ಮುನ್ನಡೆದಿದ್ದಾರೆ. ಜಗತ್ತಿನ ಶೇಕ. 17ರಷ್ಟು ಮಧುಮೇಹಿಗಳು ಭಾರತದಲ್ಲಿ ಇದ್ದಾರೆ ಎಂದು ಅಂದಾಜು. ಮಧುಮೇಹ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆಯಲ್ಲ.


ಅದು ಮೂಲತಃ 'ಇನ್ಸುಲಿನ್' ಎಂಬ ಹಾರ್ಮೋನಿನ ಕೊರತೆ. ನಾವು ಸೇವಿಸುವ ಆಹಾರದಲ್ಲಿನ ಪಿಷ್ಟಪದಾರ್ಥಗಳು ಜೀರ್ಣವಾದ ನಂತರ 'ಗ್ಲೂಕೋಸ್' ಎಂಬ ಸರಳ ಸಕ್ಕರೆಯ ರೂಪದಲ್ಲಿ ರಕ್ತವನ್ನು ಸೇರುತ್ತವೆ. ನಮ್ಮ ದೇಹದ ಬಹುತೇಕ ಜೀವಕೋಶಗಳು ಕೆಲಸ ನಿರ್ವಹಿಸಲು ಗ್ಲೂಕೋಸ್‌ನ ಅಗತ್ಯವಿದೆ. ರಕ್ತದಲ್ಲಿನ ಗ್ಲುಕೋಸನ್ನು ಜೀವಕೋಶಗಳ ಒಳಗೆ ಸೇರಿಸುವುದು ಇನ್ಸುಲಿನ್ ಹಾರ್ಮೋನಿನ ಕೆಲಸ. ಒಂದು ವೇಳೆ ಶರೀರದಲ್ಲಿ ಇನ್ಸುಲಿನ್ ಕೊರತೆಯಾದರೆ, ರಕ್ತದೊಳಗಿನ ಗ್ಲೂಕೋಸ್ ಅಂಶ ಅಂಗಾಂಗಗಳ ಜೀವಕೋಶಗಳ ಒಳಗೆ ಸೇರುವುದು ಕಡಿಮೆಯಾಗುತ್ತದೆ. ಆಗ ಜೀವಕೋಶಗಳಿಗೆ ಶಕ್ತಿಯ ಸಂಚಯ ಕಡಿಮೆಯಾಗಿ, ಅವು ಕಾರ್ಯವಿಮುಖವಾಗಿ, ಕಡೆಗೆ ನಶಿಸುತ್ತವೆ. ಹೀಗೆ ಇನ್ಸುಲಿನ್ ಕೊರತೆ ಉಂಟಾಗುವ ಶರೀರದ ಅವ್ಯವಸ್ಥೆಯೇ ಮಧುಮೇಹ.

ನಾವು ಸೇವಿಸುವ ಆಹಾರದಲ್ಲಿನ ಸಕ್ಕರೆಯ ಅಂಶವನ್ನು ಕರುಳಿನ ಲೋಳೆಪದರದ ಕೋಶಗಳು ಹೀರುತ್ತಾ, ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಹೆಚ್ಚಿಸುತ್ತವೆ. ಮಧುಮೇಹಿಗಳಲ್ಲಿ ಇನ್ಸುಲಿನ್ ಕೊರತೆಯ ಕಾರಣದಿಂದ ರಕ್ತದಲ್ಲಿನ ಗ್ಲೂಕೋಸ್ ಜೀವಕೋಶಗಳ ಒಳಗೆ ಸೇರುವುದಿಲ್ಲ. ಜೀವಕೋಶಗಳು 'ನಾವು ಕೆಲಸ ಮಾಡಲು ನಮ್ಮಲ್ಲಿ ಗ್ಲೂಕೋಸ್ ದಾಸ್ತಾನು ಇಲ್ಲ' ಎಂದು ಮಿದುಳಿಗೆ ಸಂದೇಶವನ್ನು ರವಾನಿಸುತ್ತವೆ. ಮಿದುಳು ಇದನ್ನು 'ಜೀವಕೋಶಗಳಲ್ಲಿ ಗ್ಲೂಕೋಸ್ ಇಲ್ಲ ಎಂದರೆ ಶರೀರಕ್ಕೆ ಆಹಾರದ ಆವಶ್ಯಕತೆ ಇದೆ' ಎಂದು ಅರ್ಥೈಸುತ್ತದೆ; ಹೊಟ್ಟೆಗೆ ಹಸಿವಿನ ಸಂಕೇತಗಳನ್ನು ರವಾನಿಸುತ್ತದೆ. ಹೀಗಾಗಿ ಮಧುಮೇಹದ ರೋಗಿಗಳಿಗೆ ಹಸಿವು ಹೆಚ್ಚು; ಯಾವಾಗಲೂ ಏನನ್ನಾದರೂ ತಿನ್ನುತ್ತಲೇ ಇರಬೇಕು ಎಂಬ ಬಯಕೆ. ಹೀಗೆ ಹೆಚ್ಚಾಗಿ ತಿನ್ನುತ್ತಲೇ ಇರುವುದರಿಂದ ಮತ್ತಷ್ಟು ಗ್ಲೂಕೋಸ್ ರಕ್ತವನ್ನು ಸೇರಿ, ಅಲ್ಲಿಯೇ ಉಳಿದುಬಿಡುತ್ತದೆ. ಹೀಗಾಗಿ, ಮಧುಮೇಹದ ನಿಯಂತ್ರಣದಲ್ಲಿ ಔಷಧದಷ್ಟೇ ಮಹತ್ವ ಆಹಾರಸೇವನೆಯ ಶಿಸ್ತಿಗೂ ಇದೆ.

ಆಹಾರದಲ್ಲಿ ಮೂರು ಮುಖ್ಯ ಘಟಕಗಳಿವೆ - ಪಿಷ್ಟ ಪದಾರ್ಥಗಳು, ಪ್ರೋಟೀನ್, ಮತ್ತು ತೈಲ. ಪಿಷ್ಟ ಪದಾರ್ಥಗಳಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿ ಇರುತ್ತದೆ. ಸರಳ ಸಕ್ಕರೆಯ ಅಂಶ ಅಧಿಕವಾಗಿರುವ ಹರಳುಸಕ್ಕರೆ, ಜೇನು, ಬೆಲ್ಲ, ಸಬ್ಬಕ್ಕಿ, ಮೈದಾ, ಹಣ್ಣಿನ ರಸ, ತಂಪು ಪಾನೀಯಗಳು ಇರುವ ಆಹಾರ ಬೇಗನೆ ಜೀರ್ಣವಾಗಿ, ಮಧುಮೇಹಿಗಳ ರಕ್ತದ ಸಕ್ಕರೆಯ ಅಂಶವನ್ನು ಬಹಳ ಶೀಘ್ರವಾಗಿ ಏರಿಸುತ್ತವೆ. ಇದಕ್ಕೆ ವಿರುದ್ಧವಾಗಿ ಧಾನ್ಯಗಳ ಹಿಟ್ಟಿನಲ್ಲಿ ಸಕ್ಕರೆಯ ಅಂಶ ಸಂಯುಕ್ತ ಅಣುಗಳ ರೂಪದಲ್ಲಿ ಬೆಸೆದುಕೊಂಡಿರುತ್ತದೆ. ಇದರ ಜೊತೆಗೆ ನಾರಿನ ಅಂಶವೂ ಇರುತ್ತದೆ. ಇದರಿಂದ ಸಕ್ಕರೆಯ ಅಂಶ ಬಿಡುಗಡೆಗೊಳ್ಳಲು ಸಮಯ ಹಿಡಿಯುತ್ತದೆ. ಹಿಟ್ಟಿನ ಆಹಾರ ಮಧುಮೇಹಿಗಳಲ್ಲಿ ಸಕ್ಕರೆಯ ಅಂಶವನ್ನು ಏಕಾಏಕಿ ಏರಿಸುವುದಿಲ್ಲ. ಹೀಗಾಗಿ, ಸರಳ ಸಕ್ಕರೆಗಿಂತಲೂ ನಾರಿನ ಅಂಶ ಅಧಿಕವಾಗಿರುವ, ಪಾಲಿಶ್-ರಹಿತ ಇಡೀ ಧಾನ್ಯದ ಹಿಟ್ಟಿನ ಸೇವನೆ ಮಧುಮೇಹಿಗಳಿಗೆ ಸೂಕ್ತ. ಆಹಾರದ ನಾರಿನ ಅಂಶವನ್ನು ಹೆಚ್ಚಿಸಲು ತರಕಾರಿಗಳ ಸೇವನೆ ಸಹಾಯಕ. ಇದರಿಂದ ಪಿಷ್ಟದಲ್ಲಿನ ಸಕ್ಕರೆಯ ಅಂಶ ಬಿಡುಗಡೆಯಾಗಲು ಇನ್ನಷ್ಟು ಕಾಲಾವಕಾಶ ದೊರೆಯುತ್ತದೆ. ಮಲಬದ್ಧತೆಯ ಸಮಸ್ಯೆ ಕಡಿಮೆಯಾಗುತ್ತದೆ. ಜೊತೆಗೆ ಶರೀರಕ್ಕೆ ಅಗತ್ಯವಾದ ವಿಟಮಿನ್ ಮತ್ತು ಖನಿಜಗಳು ಲಭಿಸುತ್ತವೆ.

ಮಧುಮೇಹಿಗಳಲ್ಲಿ ಪ್ರೋಟೀನ್ ಸೇವನೆ ತೀರಾ ಅಧಿಕವಾಗಬಾರದು. ಆದರೆ, ಶರೀರಕ್ಕೆ ಅಗತ್ಯವಾದಷ್ಟು ಒಳ್ಳೆಯ ಗುಣಮಟ್ಟದ ಪ್ರೋಟೀನ್ ಸೇವನೆ ಸೂಕ್ತ. ಮಾಂಸಾಹಾರಿಗಳು ಮೀನು, ಮೊಟ್ಟೆ, ಕಡಿಮೆ ಜಿಡ್ಡಿನ ಅಂಶದ ಮಾಂಸಗಳನ್ನು ಬಳಸಬಹುದು. ಸಸ್ಯಾಹಾರಿಗಳು ಬೇಳೆಕಾಳು, ಸೊಯಾಬೀನ್, ಮೊಳಕೆ ಕಟ್ಟಿದ ಕಾಳುಗಳಿಂದ ಪ್ರೋಟೀನ್ ಪಡೆಯಬಹುದು. ಆಹಾರದಲ್ಲಿ ಅನಗತ್ಯ ತೈಲದ ಪ್ರಮಾಣ ಕಡಿಮೆಯಾಗಬೇಕು. ಆದರೆ, ಅಗತ್ಯವಿದ್ದಷ್ಟು ಎಣ್ಣೆಯ ಬಳಕೆ ಒಳಿತು. ಅಡುಗೆ ಮಾಡಲು ಸಸ್ಯಮೂಲದ ತೈಲಗಳ ಬಳಕೆ ಸೂಕ್ತ. ಮೀನೆಣ್ಣೆಯಲ್ಲಿ ಹೃದಯದ ಆರೋಗ್ಯಕ್ಕೆ ನೆರವಾಗಬಲ್ಲ ಪೋಷಕಾಂಶಗಳಿರುತ್ತವೆ. ಅನಾರೋಗ್ಯಕರ ಕೊಲೆಸ್ಟ್ರಾಲ್ ಹೆಚ್ಚಿಸುವ ಎಣ್ಣೆಗಳ ಬಳಕೆ ಮಧುಮೇಹಿಗಳಿಗೆ ಒಳ್ಳೆಯದಲ್ಲ.

ಸಮತೋಲಿತ ಆಹಾರ ಮಧುಮೇಹಿಗಳ ಸೂತ್ರವಾಗಬೇಕು. ಸೇವಿಸುವ ಆಹಾರದ ಒಟ್ಟು ಕ್ಯಾಲರಿಗಳು ಆಯಾ ವ್ಯಕ್ತಿಯ ತೂಕ ಮತ್ತು ಕೆಲಸದ ಪ್ರಮಾಣಕ್ಕೆ ತಕ್ಕನಾಗಿರಬೇಕು. ಕ್ಯಾಲರಿಗಳು ಹೆಚ್ಚಾದರೆ ಮೈತೂಕದ ನಿಯಂತ್ರಣ ಏರುಪೇರಾಗುತ್ತದೆ. ಕ್ಯಾಲರಿಗಳು ತೀರಾ ಕಡಿಮೆಯಾದರೆ ಸುಸ್ತು, ಬವಳಿಕೆಗಳು ಕಾಡುತ್ತವೆ. ಹೀಗಾಗಿ, ತಮ್ಮ ವೈದ್ಯರ, ಆಹಾರತಜ್ಞರ ಜೊತೆಗೆ ಚರ್ಚಿಸಿ ತಮಗೆ ಅಗತ್ಯವಾದ ಕ್ಯಾಲರಿಗಳ ಮಟ್ಟವನ್ನು ನಿರ್ಧರಿಸಬೇಕು. ಮನಸ್ಸಿನ ಹಿಡಿತ ತಪ್ಪಿದರೆ ಐದು ನಿಮಿಷಗಳಲ್ಲಿ 500 ಕ್ಯಾಲರಿ ದೇಹ ಸೇರಿಬಿಡುತ್ತದೆ! ಆದರೆ ಅದನ್ನು ಕರಗಿಸಲು ಎರಡು ತಾಸು ವ್ಯಾಯಾಮ ಮಾಡಬೇಕಾಗುತ್ತದೆ. 'ನಾಳೆಯೋ, ಮುಂದಿನ ವಾರವೋ ಸಖತ್ ವ್ಯಾಯಾಮ ಮಾಡಿ ತಿಂದಿದ್ದನ್ನೆಲ್ಲಾ ಕರಗಿಸಿಬಿಡುತ್ತೇನೆ' ಎನ್ನುವ ಶಪಥ ಮಾಡಿ ಸಿಹಿ ತಿಂಡಿಗಳನ್ನು ಯಥೇಚ್ಛವಾಗಿ ಸೇವಿಸುವ ಬಹುತೇಕ ಮಂದಿ ಕ್ಯಾಲರಿಗಳ ಬದಲಿಗೆ ತಮ್ಮ ಮಧುಮೇಹ ನಿಯಂತ್ರಣವನ್ನು ಕರಗಿಸುತ್ತಾರೆ. ಇಂತಹ ಆಲೋಚನೆಯೇ ತಪ್ಪು. ಮಧುಮೇಹದ ನಿಯಂತ್ರಣ ಒಂದು ನಿರಂತರ ಪ್ರಕ್ರಿಯೆ. ಇದನ್ನು ಕಂತು ಕಂತಾಗಿ ನಿರ್ವಹಿಸುವುದು ಆರೋಗ್ಯಕರವಲ್ಲ. ತೂಕ ಕರಗಿಸಲು ಡಯಟ್ ಮಾಡುವ ಮಂದಿ 'ಚೀಟ್-ಡೇ' ಹೆಸರಿನಲ್ಲಿ ಅದನ್ನು ಸಡಲಿಸುವ ವಿಧಾನ ಮಧುಮೇಹಿಗಳಿಗೆ ಅನ್ವಯವಾಗುವುದಿಲ್ಲ.

ಔಷಧ, ಆಹಾರ, ವ್ಯಾಯಾಮ, ಮತ್ತು ಇವುಗಳ ಸಮನ್ವಯದಲ್ಲಿನ ಶಿಸ್ತು ಮಧುಮೇಹವನ್ನು ಸಹ್ಯವಾಗಿಸುತ್ತದೆ. ಆರೋಗ್ಯಕರ ಬಾಳ್ವೆಗೆ ಮಧುಮೇಹಿಗಳು ಈ ಸಮನ್ವಯವನ್ನು ತಪ್ಪದೇ ಸಾಧಿಸಬೇಕು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries