ನವದೆಹಲಿ: ಪ್ರಸಕ್ತ ಸಾಲಿನ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಗೆ ಡ್ಯಾನಿಯಲ್ ಬ್ಯಾರೆನ್‌ಬೊಯಿಮ್ ಹಾಗೂ ಅಲಿ ಅಬು ಅವ್ವಾದ್ ಅವರನ್ನು ಆಯ್ಕೆ ಮಾಡಲಾಗಿದೆ.
ಅರ್ಜೆಂಟೀನಾ ಸಂಜಾತ ಬ್ಯಾರೆನ್‌ಹೋಮ್ ಅವರು ಪಿಯಾನೊ ವಾದಕ ಹಾಗೂ ವಾದ್ಯಗೋಷ್ಠಿಗಳ ನಿರ್ವಾಹಕರಾಗಿದ್ದಾರೆ. ಅವ್ವಾದ್ ಅವರು ಪ್ಯಾಲೆಸ್ಟೀನ್ ಪ್ರಜೆ.
'ಈ ಇಬ್ಬರು ಇಸ್ರೇಲ್ ಹಾಗೂ ಪ್ಯಾಲೇಸ್ಟೀನ್ ನಡುವಿನ ಯುದ್ಧ ಕೊನೆಗಾಣಿಸಲು ತಮ್ಮ ಜೀವನವನ್ನೇ ಸಮರ್ಪಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಶಾಂತಿ, ನಿಶ್ಶಸ್ತ್ರಿಕರಣ ಹಾಗೂ ಅಭಿವೃದ್ಧಿಗಾಗಿ ನೀಡುವ ಇಂದಿರಾ ಗಾಂಧಿ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ' ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ, ನಿವೃತ್ತ ಮುಖ್ಯನ್ಯಾಯಮೂರ್ತಿ ಟಿ.ಎಸ್.ಠಾಕೂರ್ ತಿಳಿಸಿದ್ದಾರೆ.
ವಿಶ್ವದ ಹಲವೆಡೆ ವಾದ್ಯಗೋಷ್ಠಿಗಳನ್ನು ಆಯೋಜಿಸಿ ತಮ್ಮದೇ ಛಾಪು ಮೂಡಿಸಿರುವ ಬ್ಯಾರೆನ್‌ಹೋಮ್, ಸಂಗೀತ ಕ್ಷೇತ್ರದಲ್ಲಿನ ಸಾಧನೆ ಜೊತೆಗೆ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಸಂಗೀತವನ್ನು ಒಂದು ಸಾಧನವನ್ನಾಗಿ ಮಾಡಿಕೊಂಡು ಗಮನ ಸೆಳೆದಿದ್ದಾರೆ.
1972ರಲ್ಲಿ ಜನಿಸಿರುವ ಅವ್ವಾದ್, ರಾಜಕೀಯವಾಗಿ ಹೆಚ್ಚು ಸಕ್ರಿಯವಾಗಿರುವ ನಿರಾಶ್ರಿತರ ಕುಟುಂಬಕ್ಕೆ ಸೇರಿದವರು.
ಜೈಲಿನಲ್ಲಿದ್ದಾಗ ಪರಸ್ಪರರ ಭೇಟಿಗೆ ಅವಕಾಶ ನೀಡದ್ದನ್ನು ಪ್ರತಿಭಟಿಸಿ ಅವ್ವಾದ್ ಹಾಗೂ ಅವರ ತಾಯಿ 17 ದಿನಗಳ ಕಾಲ ಉಪವಾಸ ಕೈಗೊಂಡಿದ್ದರು. ಇದರ ಪರಿಣಾಮವಾಗಿ ಇಬ್ಬರ ಭೇಟಿಗೆ ಅನುಮತಿ ನೀಡಲಾಗಿತ್ತು.
ಈ ಅಹಿಂಸಾ ಮಾರ್ಗ ಹಾಗೂ ಗಾಂಧಿ ತತ್ವಗಳನ್ನು ತಮ್ಮ ಗುರಿ ಸಾಧನೆಗೆ ಅಳವಡಿಸಿಕೊಂಡಿರುವ ಅವ್ವಾದ್, 2014ರಲ್ಲಿ 'ರೂಟ್ಸ್' ಎಂಬ ಸಂಸ್ಥೆಯನ್ನು ಸ್ಥಾಪಿಸಿ,ಉಭಯ ಸಮುದಾಯಗಳ ನಡುವೆ ಶಾಂತಿ-ಸೌಹಾರ್ದ ನೆಲೆಸುವಂತೆ ಮಾಡಲು ಶ್ರಮಿಸುತ್ತಿದ್ದಾರೆ.