ನವದೆಹಲಿ: ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನಿರ್ದೇಶಕ ಕ್ರಿಸ್ಟೋಫರ್ ರೇ ಮುಂದಿನ ವಾರ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಭಾರತದಲ್ಲಿನ ಅಮೆರಿಕದ ರಾಯಭಾರಿ ಖಚಿತಪಡಿಸಿದ್ದಾರೆ.
ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆಗೆ ಯತ್ನ ಸಂಚಿನಲ್ಲಿ ಭಾರತದ ಕೈವಾಡವಿದೆ ಎಂಬ ಅಮೆರಿಕದ ಆರೋಪದ ನಡುವೆಯೇ ಎಫ್‌ಬಿಐ ನಿರ್ದೇಶಕ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಕಾರ್ಯಕ್ರಮವೊಂದರಲ್ಲಿ ಅವರ ಭೇಟಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಭಾರತದ ಹಿರಿಯ ಭದ್ರತಾ ಅಧಿಕಾರಿಗಳೊಂದಿಗೆ ಅವರು ಮಾತುಕತೆ ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಕಳೆದ ತಿಂಗಳು, ನ್ಯೂಯಾರ್ಕ್ ನಗರದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕ ಪನ್ನೂ ಹತ್ಯೆ ಮಾಡಲು ಸಂಚು ರೂಪಿಸಿದ್ದಕ್ಕಾಗಿ ಅಮೆರಿಕ, ನಿಖಿಲ್ ಗುಪ್ತಾ ಎಂಬ ಭಾರತೀಯ ಪ್ರಜೆಯ ಮೇಲೆ ಕೊಲೆ ಆರೋಪ ಹೊರಿಸಿತ್ತು.
ಯುಎಸ್ ಫೆಡರಲ್ ಪ್ರಾಸಿಕ್ಯೂಟರ್‌ಗಳು 52 ವರ್ಷದ ನಿಖಿಲ್ ಗುಪ್ತಾ ಅವರು ಪನ್ನೂ ಅವರನ್ನು ಕೊಲ್ಲುವ ಸಂಚಿನಲ್ಲಿ ಭಾರತೀಯ ಸರ್ಕಾರಿ ಉದ್ಯೋಗಿಯೊಂದಿಗೆ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ
ಅಮೆರಿಕದ ನ್ಯಾಯಾಂಗ ಇಲಾಖೆ ಸಲ್ಲಿಸಿದ ದಾಖಲೆಗಳ ಪ್ರಕಾರ, ಪನ್ನೂ ಹತ್ಯೆಗೆ ಯತ್ನ ಸಂಚಿನಲ್ಲಿ ಹೆಸರಿಸದ ಭಾರತೀಯ ಸರ್ಕಾರಿ ಅಧಿಕಾರಿ ಗುಪ್ತಾ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಪನ್ನೂ ಹತ್ಯೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ವ್ಯಕ್ತಿಗೂ, ಭಾರತೀಯ ಅಧಿಕಾರಿಗೂ ಸಂಬಂಧ ಕಲ್ಪಿಸಿರುವುದು ಕಳವಳದ ಸಂಗತಿ ಎಂದು ಭಾರತ ಪ್ರತಿಕ್ರಿಯಿಸಿದೆ. ಅಲ್ಲದೇ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಲು ಉನ್ನತ ಮಟ್ಟದ ವಿಶೇಷ ತನಿಖಾ ಸಮಿತಿಯನ್ನು ರಚಿಸಿದೆ.