ಕಾಸರಗೋಡು: ಕೋಯಿಕ್ಕೋಡಿನಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾರಿ ಪರಮಾಣದ ಗಾಂಜಾ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿಗಳಿಬ್ಬರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಕಾಸರಗೋಡು ಉಳಿಯತ್ತಡ್ಕದ ಉಳಿಯ ನಿವಾಸಿ ಮಹಮ್ಮದ್ ಫೈಸಲ್, ಸೀತಾಂಗೋಳಿ ಕಿನ್‍ಫ್ರಾ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಹಾಗೂ ಕೋಯಿಕ್ಕೋಡ್ ನಿವಾಸಿ ಮುರ್ಶೀದ್ ಆಲಿ ಬಂಧಿತರು.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಆಂಧ್ರ, ಒಡಿಶಾ ಸೇರಿದಂತೆ ವಿವಿಧೆಡೆಯಿಂದ ಭಾರಿ ಪ್ರಮಾಣದ ಗಾಂಜಾ ಕೇರಳಕ್ಕೆ ಸಾಗಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ತಪಾಸಣೆ ಚುರುಕುಗೊಳಿಸಲಾಗಿತ್ತು. ಕೋಯಿಕ್ಕೋಡ್ ವೈಎಂಸಿಎ ಕ್ರಾಸ್ ಬಳಿ ವಾಹನ ತಪಾಸಣೆ ನಡೆಸಿದಾಗ ಕಾರಿನಲ್ಲಿ ಗುಪ್ತವಾಗಿ ನಿರ್ಮಿಸಿಕೆಂಡಿದ್ದ ಕೋಶದೊಳಗೆ 57.09ಕಿ.ಗ್ರಾಂ ಗಾಂಜಾ ಪತ್ತೆಯಾಗಿತ್ತು. ವಶಪಡಿಸಿಕೊಂಡಿರುವ ಗಾಂಜಾದ ಮೌಲ್ಯ ಎರಡುವರೆ ಲಕ್ಷ ರೂ. ಅಂದಾಜಿಸಲಾಗಿದೆ. ಈ ರೀತಿ ಗಾಂಜಾ, ಮಾದಕ ದ್ರವ್ಯ ಸಾಗಿಸುವವರು ಕಳವುಗೈದ ವಾಹನ ಅಥವಾ ನಕಲಿ ರಿಜಿಸ್ಟ್ರೇಶನ್ ಸಂಖ್ಯೆ ಅಳವಡಿಸುತ್ತಿರುವುದಾಗಿಯೂ ಮಾಹಿತಿಯಿದೆ.