ವಿಶ್ವಸಂಸ್ಥೆ: ಭದ್ರತಾ ಮಂಡಳಿಯ ಸದಸ್ಯರು ಸೇರಿದಂತೆ ಅನೇಕ ರಾಷ್ಟ್ರಗಳ ಬೆಂಬಲದೊಂದಿಗೆ ಗಾಜಾದಲ್ಲಿ ಮಾನವೀಯ ನೆಲೆಯಲ್ಲಿ ತಕ್ಷಣ ಕದನ ವಿರಾಮ ಘೋಷಿಸುವ ಭದ್ರತಾ ಮಂಡಳಿಯ ನಿರ್ಣಯಕ್ಕೆ ಅಮೆರಿಕ ವಿಟೊ ಅಧಿಕಾರ ಚಲಾಯಿಸಿದೆ.
ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳ ಪೈಕಿ 13 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ಬ್ರಿಟನ್ ಮತದಾನದಿಂದ ದೂರ ಉಳಿಯಿತು.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯನ್ನು ಖಂಡಿಸುವಲ್ಲಿ ಮತ್ತು ಇಸ್ರೇಲ್‌ನ ಆತ್ಮರಕ್ಷಣೆ ಹಕ್ಕನ್ನು ಅನುಮೋದಿಸುುವಲ್ಲಿ ಭದ್ರತಾ ಮಂಡಳಿ ವಿಫಲಗೊಂಡಿದೆ ಎಂದು ಅಮೆರಿಕ ದೂರಿದೆ.
ಈ ಕುರಿತು ಹೇಳಿಕೆ ನೀಡಿರುವ ಅಮೆರಿಕದ ಉಪ ರಾಯಭಾರಿ ರಾಬರ್ಟ್ ವುಡ್, ಕದನ ವಿರಾಮ ಘೋಷಿಸುವುದರೊಂದಿಗೆ ಗಾಜಾ ಮೇಲೆ ಮತ್ತೆ ಹಮಾಸ್ ನಿಯಂತ್ರಣ ಸಾಧಿಸಲಿದ್ದು, ಮುಂದಿನ ಯುದ್ಧಕ್ಕೆ ಅವಕಾಶ ಮಾಡಿಕೊಡಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ಯಾಲೆಸ್ಟೀನ್ ಹಾಗೂ ಇಸ್ರೇಲ್ ಜನರು ಶಾಂತಿಯುತವಾಗಿ ಬದುಕಬೇಕು. ಆದರೆ ದೀರ್ಘಕಾಲದ ಶಾಂತಿಯನ್ನು ಹಮಾಸ್ ಬಯಸುವುದಿಲ್ಲ. ಹಾಗಾಗಿ ಶಾಂತಿಯನ್ನು ಅಮೆರಿಕ ಬಯಸುತ್ತಾದರೂ ತಕ್ಷಣದ ಕದನ ವಿರಾಮ ನಿರ್ಣಯವನ್ನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಸುಮಾರು 1,200 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಇಸ್ರೇಲ್ ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ 17,400ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 40 ಸಾವಿರ ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.