ರಾಯಪುರ: ಛತ್ತೀಸಗಢ ವಿಧಾನಸಭೆ ಚುನಾವಣೆಯ ಮತ ಎಣಿಕೆ ಭರದಿಂದ ಸಾಗುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
90 ಸ್ಥಾನಗಳನ್ನು ಹೊಂದಿರುವ ಛತ್ತೀಸಗಢದಲ್ಲಿ ಕಾಂಗ್ರೆಸ್ ಸ್ಪಷ್ಟ ಮೇಲುಗೈ ಸಾಧಿಸಿದ್ದು, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು.
ಸದ್ಯ 55 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, 32ರಲ್ಲಿ ಕಾಂಗ್ರೆಸ್ ಹಾಗೂ 3ರಲ್ಲಿ ಪಕ್ಷೇತರರು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಛತ್ತೀಸಗಢ ವಿಧಾನಸಭೆಗೆ ನವೆಂಬರ್ 7 ಹಾಗೂ 17ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ 20 ಕ್ಷೇತ್ರಗಳಿಗೆ ಮತ್ತು 2ನೇ ಹಂತದಲ್ಲಿ 70 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.
2003ರಿಂದ 2018ರ ವರೆಗೆ ಸತತ ಮೂರು ಬಾರಿ ಆಡಳಿತ ನಡೆಸಿದ್ದ ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿತ್ತು. ಕೇವಲ 15 ಸ್ಥಾನಗಳನ್ನು ಜಯಿಸುವುದರೊಂದಿಗೆ ಅಧಿಕಾರದಿಂದ ಕೆಳಗಿಳಿದಿತ್ತು.
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 68 ಕ್ಷೇತ್ರಗಳಲ್ಲಿ ಜಯ ಗಳಿಸಿ ಭಾರಿ ಬಹುಮತ ಸಾಧಿಸಿತ್ತು. ಜೆಸಿಸಿ ಮತ್ತು ಬಿಎಸ್‌ಪಿ ಪಕ್ಷಗಳು ಕ್ರಮವಾಗಿ 5 ಹಾಗೂ 2 ಸ್ಥಾನ ಜಯಿಸಿದ್ದವು. ಛತ್ತೀಸಗಢ ವಿಧಾನಸಭೆಯ ಮ್ಯಾಜಿಕ್ ನಂಬರ್ 46.
ಕಣದಲ್ಲಿದ್ದ ಪ್ರಮುಖ ನಾಯಕರು: ಛತ್ತೀಸಗಢ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಭೂಪೇಶ್ ಬಘೆಲ್, ಮಾಜಿ ಸಿಎಂ, ಬಿಜೆಪಿ ನಾಯಕ ರಮಣ್ ಸಿಂಗ್ ಅವರು ಕಣಕ್ಕಿಳಿದಿದ್ದರು.