ನವದೆಹಲಿ: ಮಣಿಪುರ ಕೇಡರ್‌ನ ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಅರೆಸೇನಾ ಪಡೆಗಳ ಮುಖ್ಯಸ್ಥರನ್ನಾಗಿ ಗುರುವಾರ ನೇಮಕ ಮಾಡಲಾಗಿದೆ.
ಗುಪ್ತಚರ ಇಲಾಖೆ ಅಧಿಕಾರಿ ರಾಹುಲ್ ರಸ್ಗೋತ್ರಾ ಅವರನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಉಸ್ತುವಾರಿಯಾಗಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಡಿಜಿಯಾಗಿ ನೀನಾ ಸಿಂಗ್ ಹಾಗೂ ಮಣಿಪುರ-ಕೇಡರ್ ಐಪಿಎಸ್ ಅಧಿಕಾರಿ ಅನೀಶ್ ದಯಾಳ್ ಸಿಂಗ್ ಅವರನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಮಹಾನಿರ್ದೇಶಕರಾಗಿ ನೇಮಿಸಲಾಗಿದೆ.
ಸಿಐಎಸ್‌ಎಫ್ ಮುಖ್ಯಸ್ಥೆಯಾದ ಮೊದಲ ಮಹಿಳೆ
ನೀನಾ ಸಿಂಗ್ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಮುಖ್ಯಸ್ಥರಾದ ಮೊದಲ ಮಹಿಳೆಯಾಗಿದ್ದಾರೆ. ಪ್ರಸ್ತುತ ಅವರು ಸಿಐಎಸ್‌ಎಫ್‌ನ ವಿಶೇಷ ಮಹಾನಿರ್ದೇಶಕರಾಗಿದ್ದಾರೆ. ಇದು (ಸಿಐಎಸ್‌ಎಫ್) ದೇಶದಾದ್ಯಂತ ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೋ ಹಾಗೂ ಸರ್ಕಾರಿ ಕಟ್ಟಡಗಳ ಭದ್ರತಾ ಜವಾಬ್ದಾರಿ ಹೊತ್ತಿದೆ.
ಸಿಂಗ್ ಅವರನ್ನು ಮಣಿಪುರ-ಕೇಡರ್ ಅಧಿಕಾರಿಯಾಗಿ ಭಾರತೀಯ ಪೊಲೀಸ್ ಸೇವೆಗೆ (IPS) ನೇಮಿಸಲಾಗಿತ್ತು. ಬಳಿಕ ರಾಜಸ್ಥಾನ ಕೇಡರ್‌ಗೆ ತೆರಳಿದ್ದರು. 1989ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅವರು ಈ ವರ್ಷದ ಆಗಸ್ಟ್ 31 ರಂದು ಶೀಲ್ ವರ್ಧನ್ ಸಿಂಗ್ ಅವರ ನಿವೃತ್ತಿಯ ನಂತರ ಸಿಐಎಸ್‌ಎಫ್ ಡಿಜಿಯ ಹೆಚ್ಚುವರಿ ಪ್ರಭಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಕ್ಯಾಬಿನೆಟ್ ನೇಮಕಾತಿ ಸಮಿತಿ 2024ರ ಜುಲೈ 31ರವರೆಗೆ ಸಿಐಎಸ್‌ಎಫ್‌ನ ಡಿಜಿಯಾಗಿ ನೀನಾ ಸಿಂಗ್ ಅವರ ನೇಮಕಾತಿಯನ್ನು ಅನುಮೋದಿಸಿದೆ.
ಸಿಆರ್‌ಪಿಎಫ್ ಮಹಾನಿರ್ದೇಶರಾಗಿ ಅನೀಶ್ ದಯಾಳ್ ಸಿಂಗ್:
1988ರ ಬ್ಯಾಚ್‌ನ ಮಣಿಪುರ-ಕೇಡರ್ ಐಪಿಎಸ್ ಅಧಿಕಾರಿ ಅನೀಶ್ ದಯಾಳ್ ಸಿಂಗ್, ವಿಶ್ವದ ಅತಿದೊಡ್ಡ ಅರೆಸೇನಾ ಪಡೆಯಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ಕಳೆದ ಕೆಲವು ವಾರಗಳಿಂದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮುಖ್ಯಸ್ಥರಾಗಿ ಹೆಚ್ಚುವರಿಯಾಗಿ ಈ ಹುದ್ದೆಯನ್ನು ನಿರ್ವಹಿಸಿದ್ದಾರೆ. 2024ರ ಡಿಸೆಂಬರ್ 31ರವರೆಗೆ ಅಂದರೆ ತಮ್ಮ ನಿವೃತ್ತಿಯಾಗುವವರೆಗೆ ಸಿಆರ್‌ಪಿಎಫ್‌ನ ಮುಖ್ಯಸ್ಥರಾಗಿರುತ್ತಾರೆ.
ಸುಮಾರು 3.25 ಲಕ್ಷ ಸಿಬ್ಬಂದಿಯ ಬಲವನ್ನು ಹೊಂದಿರುವ ಸಿಆರ್‌ಪಿಎಫ್, ಶಾಂತಿ ನಿರ್ವಹಣೆಗಾಗಿ ದೇಶದ ಉದ್ದಗಲಕ್ಕೂ ಹರಡಿಕೊಂಡಿದೆ. ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ತೊಡೆದುಹಾಕುವಲ್ಲಿ ಸಕ್ರಿಯ ಪಾತ್ರ ನಿರ್ವಹಿಸುತ್ತಿದೆ.
ಐಟಿಬಿಪಿ ಮಹಾನಿರ್ದೇಶಕರಾಗಿ ರಾಹುಲ್ ರಸ್ಗೋತ್ರ
ಮಣಿಪುರ ಕೇಡರ್‌ನ 1989-ಬ್ಯಾಚ್‌ನ ಐಪಿಎಸ್ ಅಧಿಕಾರಿ ರಸ್ಗೋತ್ರ ಅವರು ಸುಮಾರು ಮೂರು ದಶಕಗಳ ಕಾಲ ಗುಪ್ತಚರ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಸದ್ಯ ಅವರು ಸುಮಾರು 90 ಸಾವಿರ ಸಿಬ್ಬಂದಿ ಬಲವನ್ನು ಹೊಂದಿರುವ ಐಟಿಬಿಪಿಯ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ರಸ್ಗೋತ್ರ ಅವರು ಗುಪ್ತಚರ ಇಲಾಖೆಯಲ್ಲಿ (ಐಬಿ) ವಿಶೇಷ ನಿರ್ದೇಶಕರಾಗಿದ್ದರು. 2025ರ ಸೆಪ್ಟೆಂಬರ್ 30 ರವರೆಗೆ ಅಂದರೆ ಅವರ ನಿವೃತ್ತಿಯ ದಿನಾಂಕದವರೆಗೆ ಈ ಹುದ್ದೆಗೆ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗುಜರಾತ್ ಕೇಡರ್‌ನ 1989-ಬ್ಯಾಚ್‌ನ ಐಪಿಎಸ್ ಅಧಿಕಾರಿ ವಿವೇಕ್ ಶ್ರೀವಾಸ್ತವ ಅವರು ಅಗ್ನಿಶಾಮಕ ಸೇವೆ, ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳದ ಮಹಾನಿರ್ದೇಶಕರಾಗಿರುತ್ತಾರೆ. 2025ರ ಜೂನ್ 30ರವರೆಗೆ ಅಂದರೆ ಅವರ ನಿವೃತ್ತಿಯ ದಿನಾಂಕದವರೆಗೆ ಈ ಹುದ್ದೆಗೆ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.