ಗುವಾಹಟಿ: ಬಾಲ್ಯ ವಿವಾಹದ ವಿರುದ್ಧ ರಾಜ್ಯ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮದ ಪರಿಣಾಮ ಅಸ್ಸಾಂನಲ್ಲಿ ಹದಿಹರೆಯದ ಗರ್ಭಧಾರಣೆ ಪ್ರಕರಣಗಳು ತೀವ್ರವಾಗಿ ಇಳಿಮುಖವಾಗಿವೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಶೂನ್ಯಕ್ಕೆ ತರುವವರೆಗೆ ವಿಶ್ರಮಿಸುವುದಿಲ್ಲ:
'2022-23ರಲ್ಲಿ ರಾಜ್ಯದಲ್ಲಿ ನೋಂದಾಯಿತ ಹದಿಹರೆಯದ ಗರ್ಭಿಣಿಯರ ಸಂಖ್ಯೆ 1,05,942 ಇತ್ತು. 2023-24ರಲ್ಲಿ 40,012ಕ್ಕೆ ಇಳಿದಿದೆ. ಈ ಅಂಕಿ ಅಂಶವನ್ನು ಶೂನ್ಯಕ್ಕೆ ತರುವವರೆಗೆ ನಾವು ವಿಶ್ರಮಿಸುವುದಿಲ್ಲ' ಎಂದು ಸಿಎಂ ಹೇಳಿದರು.
ಮುಖ್ಯಮಂತ್ರಿ ನೀಡಿದ ಮಾಹಿತಿಯ ಪ್ರಕಾರ, 'ಧುಬ್ರಿ ಮತ್ತು ದಕ್ಷಿಣ ಸಲ್ಮಾರಾ ಅವಳಿ ಜಿಲ್ಲೆಗಳಲ್ಲಿ ಹಿಂದಿನ ವರ್ಷ 14,769 ಹದಿಹರೆಯದ ಗರ್ಭಧಾರಣೆ ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ 5,482ಕ್ಕೆ ಇಳಿದಿದೆ. ನಾಗಾನ್ ಮತ್ತು ಹೊಜೈ ಜಿಲ್ಲೆಗಳಲ್ಲಿ 12,107 ರಿಂದ 4,578 ಕ್ಕೆ ಇಳಿದಿವೆ. ಇತ್ತ ಬರ್ಪೇಟಾ ಮತ್ತು ಬಜಾಲಿ ಜಿಲ್ಲೆಗಳಲ್ಲಿ 11,449 ರಿಂದ 4,000ಕ್ಕೆ ಇಳಿಕೆ'ಯಾಗಿದೆ.
ರಾಜ್ಯ ಸರ್ಕಾರ ಈ ವರ್ಷದ ಫೆಬ್ರುವರಿ ಮತ್ತು ಅಕ್ಟೋಬರ್‌ನಲ್ಲಿ ಬಾಲ್ಯವಿವಾಹದ ವಿರುದ್ಧ ಎರಡು ಹಂತಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಅಲ್ಪಸಂಖ್ಯಾತರ ಪ್ರಾಬಲ್ಯದ ಜಿಲ್ಲೆಗಳಲ್ಲಿ ಸುಮಾರು 5,500 ಜನರನ್ನು ಬಂಧಿಸಲಾಗಿತ್ತು.
'2026ರ ವೇಳೆಗೆ ಈ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ತೊಡೆದುಹಾಕಲಾಗುವುದು. ಎಲ್ಲಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಬಾಲ್ಯ ವಿವಾಹ ತಡೆ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು' ಎಂದು ಮುಖ್ಯಮಂತ್ರಿ ಶರ್ಮಾ ತಿಳಿಸಿದ್ದಾರೆ.