HEALTH TIPS

COP28 Summit: ಮರುಬಳಕೆ ಇಂಧನಗಳ ಬಳಕೆ ವೃದ್ಧಿಗೆ ಕರೆ, 116 ರಾಷ್ಟ್ರಗಳ ಸಹಮತ

              ದುಬೈ: ಪರಿಸರಕ್ಕೆ ಇಂಗಾಲದ ಡೈಆಕ್ಸೈಡ್‌ ಸೇರ್ಪಡೆ ಪ್ರಮಾಣವನ್ನು ತಗ್ಗಿಸಲು, 2030ರ ವೇಳೆಗೆ ಮರುಬಳಕೆ ಇಂಧನದ ಬಳಕೆಯನ್ನು ಮೂರು ಪಟ್ಟು ಹಾಗೂ ಇಂಧನ ಕ್ಷಮತೆ ಕಾರ್ಯಕ್ರಮಗಳನ್ನು ದುಪ್ಪಟ್ಟುಗೊಳಿಸುವ ಗುರಿಯನ್ನು ಹೊಂದುವ ಸಿಒಪಿ28 ತಾಪಮಾನ ಒಡಂಬಡಿಕೆಗೆ 116 ರಾಷ್ಟ್ರಗಳು ಸಹಮತ ವ್ಯಕ್ತಪಡಿಸಿವೆ.

             ಯೂರೋಪಿಯನ್‌ ಕಮಿಷನ್‌ನ ಅಧ್ಯಕ್ಷೆ ಉರ್ಸುಲಾ ವೊನ್‌ ಡೆರ್ ಲೆಯೆನ್ ಅವರು ಶುಕ್ರವಾರ ಇಲ್ಲಿ ಈ ವಿಷಯ ತಿಳಿಸಿದರು. ಇಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ 'ಸಿಒಪಿ 28' ಹವಾಮಾನ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಗುರಿ ಹೊಂದಲು 116 ರಾಷ್ಟ್ರಗಳು ಸಹಮತ ಹೊಂದಿರುವುದು ಉತ್ತಮ ಬೆಳವಣಿಗೆ ಎಂದರು.

              ಈ ವರ್ಷಾರಂಭದಲ್ಲಿ ಯೂರೋಪಿಯನ್‌ ಒಕ್ಕೂಟವು ಮೊದಲಿಗೆ ಹೊಸ ಗುರಿ ನಿಗದಿಗೆ ಮನವಿ ಮಾಡಿತು. ಬಳಿಕ, ಸಿಒಪಿ 28 ಆತಿಥ್ಯ ವಹಿಸಿರುವ ಯುಎಇ ಹಾಗೂ ನಂತರದಲ್ಲಿ ಜಿ 7 ಮತ್ತು ಜಿ 20 ಶೃಂಗ ರಾಷ್ಟ್ರಗಳು ಒತ್ತು ನೀಡಿದ್ದವು. ಜಾಗತಿಕವಾಗಿ, ಹಸಿರುಮನೆ ಅನಿಲಗಳ ಹೊರಸೂಸುವಿಕೆ ಪ್ರಮಾಣದಲ್ಲಿ ಜಿ 20 ದೇಶಗಳ ಪಾಲು ಶೇ 80ರಷ್ಟಿದೆ.

               ಸಿಒಪಿ ಕುರಿತ ಅಂತಿಮ ನಿರ್ಧಾರದಲ್ಲಿ ಈ ಗುರಿ ಸೇರ್ಪಡೆಗೊಳಿಸಲು ಎಲ್ಲ ರಾಷ್ಟ್ರಗಳಿಗೆ ನಾನು ಕೋರುತ್ತೇನೆ. ಇಂಥ ಕ್ರಮವು ಹೂಡಿಕೆದಾರರು ಮತ್ತು ಬಳಕೆದಾರರಿಗೆ ಸ್ಪಷ್ಟ ಸಂದೇಶ ರವಾನಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.

              ಉಲ್ಲೇಖಿತ ಗುರಿ ಕುರಿತ ಚರ್ಚೆಗಳು ಪ್ರತ್ಯೇಕವಾಗಿದ್ದರೂ ಪರಸ್ಪರ ಸಂಬಂಧವಿದೆ. ಅಂತಿಮವಾಗಿ ಸಿಒಪಿ 28 ಅಂತಿಮ ಒಪ್ಪಂದವು ಎಲ್ಲ ಪ್ರಕಾರದ ಪಳೆಯುಳಿಕೆ ಇಂಧನದ ಬಳಕೆಯನ್ನು ಕುಗ್ಗಿಸುವುದು ಅಥವಾ ಕೈಬಿಡುವುದರ ಕುರಿತಂತೆ ದೇಶಗಳಿಗೆ ಬದ್ಧತೆಯನ್ನು ನಿಗದಿಪಡಿಸಲಿದೆ ಎಂದು ಅಭಿಪ್ರಾಯಪಟ್ಟರು.

               ಗುರಿಯನ್ನು ಸಾಧಿಸುವ ಹೆಜ್ಜೆಯಾಗಿ ಪವನ, ಸೋಲಾರ್, ಜಲವಿದ್ಯುತ್‌ ಮತ್ತು ಇತರೆ ಮರುಬಳಕೆ ಇಂಧನ ಮೂಲಗಳಿಗೆ ಅದ್ಯತೆ ನೀಡುವುದು, ತೈಲ, ಅನಿಲ, ಕಲ್ಲಿದ್ದಲು ಬೇಡಿಕೆ ಕುಗ್ಗಿಸುವುದು ಅಗತ್ಯ ಎಂದೂ ಅಭಿಪ್ರಾಯಪಟ್ಟರು.

                                      ಹಿಮಾಲಯದ ರಾಷ್ಟ್ರಗಳಿಗೆ ನೆರವು -ಗುಟೆರೆಸ್

                 : ಹಿಮಾಲಯ ತಪ್ಪಲಿನಲ್ಲಿ ನೀರ್ಗಲ್ಲು ಕರಗುತ್ತಿರುವ ಪ್ರಮಾಣವು ಆತಂಕಪಡುವಂತಿದ್ದು ದುರಂತ ಸಂಭವಿಸುವ ಸಾಧ್ಯತೆಗಳಿವೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೊನಿಯೊ ಗುಟೆರೆಸ್ ಎಚ್ಚರಿಸಿದ್ದಾರೆ.

                 ತಾಪಮಾನ ರಕ್ಷಣೆ ಕುರಿತ ಸಮ್ಮೇಳನದಲ್ಲಿ ಶನಿವಾರ ಮಾತನಾಡಿದ ಅವರು ಅಭಿವೃದ್ಧಿಶೀಲ ದೇಶಗಳ ಅಗತ್ಯಗಳಿಗೆ ಮುಖ್ಯವಾಗಿ ಹಿಮಾಲಯ ಪರ್ವತಗಳಿರುವ ದೇಶಗಳಿಗೆ ಈ ಸಮ್ಮೇಳನ ಸ್ಪಂದಿಸಬೇಕಾಗಿದೆ ಎಂದು ಹೇಳಿದರು.

              ನೀರ್ಗಲ್ಲುಗಳು ಮತ್ತು 10 ಪ್ರಮುಖ ನದಿಗಳ ಮೇಲೆ ಅಂದಾಜು 24 ಕೋಟಿ ಜನರು ಅವಲಂಬಿತರಾಗಿದ್ದಾರೆ. ಹಿಮಾಲಯದಲ್ಲಿ ಮೂಡುವ ಹಿಂದೂ ಗಂಗಾ ಬ್ರಹ್ಮಪುತ್ರ ನದಿಗಳೂ ಇದರಲ್ಲಿ ಸೇರಿವೆ. ಈ ನದಿಗಳ ಜಲಾನಯನವಾದ ಭಾರತ ಸೇರಿದಂತೆ ಎಂಟು ದೇಶಗಳಲ್ಲಿ ಕೋಟಿಗೂ ಹೆಚ್ಚು ಜನ ಅವಲಂಬಿತರಾಗಿದ್ದಾರೆ ಎಂದರು.

                  ನೇಪಾಳದಲ್ಲಿನ ಹಿಮಗಡ್ಡೆ ಕೇವಲ 30 ವರ್ಷಗಳಲ್ಲಿ ಕರಗಿದೆ. ಇದಕ್ಕೂ ಹಸಿರುಮನೆ ಅನಿಲ ಮಾಲಿನ್ಯಕ್ಕೂ ತಾಪಮಾನ ಹೆಚ್ಚಳಕ್ಕೂ ನೇರವಾದ ಸಂಬಂಧವಿದೆ ಎಂದು ಗುಟೆರೆಸ್ ಹೇಳಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries