ನವದೆಹಲಿ: ಸಂಸತ್ ಭದ್ರತಾ ಲೋಪ ಪ್ರಕರಣದ ಆರು ಆರೋಪಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೊಂದಿರುವ ಖಾತೆಗಳ ವಿವರ ಒದಗಿಸುವಂತೆ ದೆಹಲಿ ಪೊಲೀಸರು ಮೆಟಾ ಕಂಪನಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಮುಖ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ವಾಟ್ಸ್‌ಆಯಪ್‌ನ ಒಡೆತನವನ್ನು ಮೆಟಾ ಹೊಂದಿದೆ.
ಆರೋಪಿಗಳ ಖಾತೆಗಳಲ್ಲಿರುವ ವಿವರಗಳು ಹಾಗೂ ಭಗತ್ ಸಿಂಗ್ ಅಭಿಮಾನಿಗಳ ಪುಟದ ಮಾಹಿತಿ ನೀಡುವಂತೆ ಪೊಲೀಸರು ಮೆಟಾ ಕಂಪನಿಯನ್ನು ಕೇಳಿಕೊಂಡಿದ್ದಾರೆ ಎಂದು ಮೂಲಗಳು ಸೋಮವಾರ ಹೇಳಿವೆ. ವಾಟ್ಸ್‌ಆಯಪ್ ಚಾಟ್‌ನ ವಿವರಗಳನ್ನು ನೀಡುವಂತೆಯೂ ಕೋರಿದ್ದಾರೆ.
ಪ್ರಮುಖ ಸಂಚುಕೋರ ಲಲಿತ್ ಝಾ, ತನ್ನ ಹಾಗೂ ಇತರ ಆರೋಪಿಗಳ ಮೊಬೈಲ್ ಫೋನ್‌ಗಳನ್ನು ರಾಜಸ್ಥಾನದ ನಾಗೌರ್‌ನಲ್ಲಿ ಸುಟ್ಟುಹಾಕಿರುವುದಾಗಿ ಪೊಲೀಸರು ಹೇಳಿದ್ದಾರೆ. ಮೊಬೈಲ್ ಫೋನ್‌ಗಳ ಕೆಲವು ಭಾಗಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಪೊಲೀಸ್ ಸುಪರ್ದಿಗೆ ಬ್ಯಾಂಕ್ ಪಾಸ್ ಬುಕ್: ಡಿಸೆಂಬರ್ 13ರ ಸಂಚನ್ನು ಕಾರ್ಯಗತಗೊಳಿಸಲು ಯಾರಿಂದಾದರೂ ಹಣ ಪಡೆದಿದ್ದಾರೆಯೇ ಎಂಬ ಮಾಹಿತಿ ಕಲೆಹಾಕಲು ಪೊಲೀಸರು ಎಲ್ಲಾ ಆರೋಪಿಗಳ ಬ್ಯಾಂಕ್ ಖಾತೆ ವಿವರಗಳನ್ನು ಕಲೆಹಾಕಿದ್ದಾರೆ.
ದೆಹಲಿ ಪೊಲೀಸ್ ವಿಶೇಷ ಘಟಕದ ಪ್ರತ್ಯೇಕ ತಂಡಗಳು, ಆರೋಪಿಗಳ ಕುಟುಂಬ ಸದಸ್ಯರನ್ನು ಭಾನುವಾರ ಭೇಟಿಯಾಗಿ ಬ್ಯಾಂಕ್ ಖಾತೆ ವಿವರಗಳನ್ನು ಪಡೆದಿವೆ. ನೀಲಂ ದೇವಿ ಮತ್ತು ಸಾಗರ್ ಶರ್ಮಾ ಅವರ ಬ್ಯಾಂಕ್ ಪಾಸ್ ಬುಕ್‌ಅನ್ನು ಕ್ರಮವಾಗಿ ಹರಿಯಾಣದ ಜೀಂದ್ ಮತ್ತು ಉತ್ತರ ಪ್ರದೇಶದ ಲಖನೌನಲ್ಲಿರುವ ಮನೆಗಳಿಂದ ಪೊಲೀಸರು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.