ನವದೆಹಲಿ: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಅಲ್ಲಲ್ಲಿ ಪ್ರಕಟಿಸುವ ತಂಬಾಕು ವಿರೋಧಿ ಬಿತ್ತಿಚಿತ್ರಗಳನ್ನು ತೆಗೆದುಹಾಕಲು ಸೂಚಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ. ಜತೆಗೆ ಇಂಥ ಅರ್ಜಿ ಸಲ್ಲಿಸಿದ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ತಂಬಾಕು ಸೇವನೆ ವಿರುದ್ಧ ಜಾಗೃತಿ ಮೂಡಿಸುವ ಚಿತ್ರವನ್ನು ಚಿತ್ರಮಂದಿರ, ಟಿ.ವಿ., ಒಟಿಟಿ ವೇದಿಕೆಗಳಲ್ಲಿ ಪ್ರದರ್ಶನ ಮಾಡದಂತೆ ನಿರ್ಬಂಧ ಹೇರಬೇಕು ಎಂದು ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರು, ಅರ್ಜಿಯನ್ನು ವಜಾಗೊಳಿಸಿದರು.
'ಈ ಅರ್ಜಿ ಸಲ್ಲಿಸಿದವರು ವಿಷಾದ ವ್ಯಕ್ತಪಡಿಸಬೇಕು. ಆನಂತರವಷ್ಟೇ ಪ್ರತಿಕ್ರಿಯೆ ನೀಡಲಾಗುವುದು. ಪ್ರಕರಣಕ್ಕೆ ಸ್ಪಷ್ಟವಾದ ವಿಷಾದ ಇರಬೇಕು' ಎಂದು ನ್ಯಾಯಮೂರ್ತಿ ತಾಕೀತು ಮಾಡಿದರು. ಪೀಠದಲ್ಲಿ ನ್ಯಾ. ಮಿನಿ ಪುಷ್ಕರ್ಣ ಅವರೂ ಇದ್ದರು.
'ತಂಬಾಕು ಸೇವನೆಯಿಂದ ಆಗುವ ಅನಾಹುತಗಳನ್ನು ಜನರ ಗಮನಕ್ಕೆ ತಂದು ಅದರಿಂದ ಮುಕ್ತರಾಗುವಂತೆ ನ್ಯಾಯಾಲಯ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದು ಜನರ ಆರೋಗ್ಯ ಹಿತದೃಷ್ಟಿಯಿಂದ ಸರ್ಕಾರ ಅಗತ್ಯವಾಗಿ ಕೈಗೊಳ್ಳಬೇಕಾದ ಕ್ರಮಗಳು. ಆದರೆ ಅದರ ವಿರುದ್ಧವೇ ಸಲ್ಲಿಕೆಯಾಗಿರುವ ಈ ಅರ್ಜಿಯು ಪ್ರಾಯೋಜಿತವೂ ಆಗಿರುವ ಸಾಧ್ಯತೆ ಇದೆ' ಎಂದು ಪೀಠ ಕಳವಳ ವ್ಯಕ್ತಪಡಿಸಿತು.
ಸಿಗರೇಟು ಹಾಗೂ ಇತರ ತಂಬಾಕು ಉತ್ಪನ್ನಗಳ ಕಾಯ್ದೆ (ಕೋಟ್ಪಾ) ಅಡಿಯಲ್ಲಿ ತಂಬಾಕು ವಿರೋಧಿ ಜಾಹೀರಾತುಗಳನ್ನು ಕೇಂದ್ರ ಆರೋಗ್ಯ ಮಂತ್ರಾಲಯ ಎಲ್ಲೆಡೆ ಪ್ರಕಟಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಇವು ತಂಬಾಕು ಸೇವನೆಯ ಅಪಾಯಗಳನ್ನು ಸಾರುತ್ತಿವೆ. ಆದರೆ ಇವುಗಳಿಗೆ ಬಳಸುವ ಚಿತ್ರಗಳು ಹಾಗೂ ಗ್ರಾಫಿಕ್ಸ್‌ಗಳು ಉತ್ತಮ ಅಭಿರುಚಿಯದ್ದಾಗಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.