ಕೋಲ್ಕತ್ತಾ: ದೆಹಲಿಯಲ್ಲಿ ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಸಭೆಗೂ ಮುನ್ನಾದಿನ, ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷ ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ತನ್ನ “ಜಮೀಂದಾರಿ ಮನಸ್ಥಿತಿ ”ಯನ್ನು ತ್ಯಜಿಸಬೇಕು ಮತ್ತು ಮಮತಾ ಬ್ಯಾನರ್ಜಿಯಂತಹ ಹಿರಿಯ ನಾಯಕರನ್ನು ಮೈತ್ರಿಕೂಟದ ಮುಖವಾಗಿ ಪ್ರತಿಬಿಂಬಿಸುವ ಕೆಲಸ ಮಾಡಬೇಕು ಎಂದು ಸೋಮವಾರ ಒತ್ತಾಯಿಸಿದೆ.
ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬ್ಯಾನರ್ಜಿ ಅವರು ಈಗಾಗಲೇ ಸಭೆಗಾಗಿ ನವದೆಹಲಿಯಲ್ಲಿದ್ದಾರೆ ಮತ್ತು 2024 ರ ಲೋಕಸಭೆ ಚುನಾವಣೆಯ ನಂತರವೇ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
"ಮೂರು ರಾಜ್ಯಗಳ ಸೋಲಿನಿಂದ ಕಾಂಗ್ರೆಸ್ ಪಾಠ ಕಲಿಯಬೇಕು. ಜಮೀನ್ದಾರಿ ಮನಸ್ಥಿತಿಯಿಂದ ಹೊರ ಬನ್ನಿ. ತನ್ನ ಮಿತ್ರ ಪಕ್ಷಗಳನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಇಂಡಿಯಾ ಮೈತ್ರಿಕೂಟ ಗೆಲುವು ಖಚಿತಪಡಿಸಿಕೊಳ್ಳಲು ಮೂರು ಬಾರಿ ಮುಖ್ಯಮಂತ್ರಿ ಮತ್ತು ಮೂರು ಬಾರಿ ಕೇಂದ್ರ ಸಚಿವರಾಗಿರುವ ಮಮತಾ ಬ್ಯಾನರ್ಜಿ ಅವರನ್ನು ಮತ್ತು ಇತರ ಹಿರಿಯ ನಾಯಕರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಬೇಕು" ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೇಶದ ಅತ್ಯಂತ ಹಳೆಯ ಪಕ್ಷದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಘೋಷ್, "ಕಾಂಗ್ರೆಸ್ ಪದೇ ಪದೇ ಬಿಜೆಪಿಯನ್ನು ಸೋಲಿಸಲು ವಿಫಲವಾಗಿದೆ. ಮತ್ತೊಂದೆಡೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಿಜೆಪಿಯನ್ನು ಹತ್ತಾರು ಬಾರಿ ಸೋಲಿಸಿದ ದಾಖಲೆ ಬರೆದಿದೆ" ಎಂದರು.
ಟಿಎಂಸಿಯ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕ ವಕ್ತಾರೆ ಸೌಮ್ಯಾ ಐಚ್ ರಾಯ್ ಅವರು, "ಬಿಜೆಪಿ ವಿರುದ್ಧ ಹೇಗೆ ಹೋರಾಡಬೇಕು ಎಂಬುದರ ಕುರಿತು ನಾವು ಟಿಎಂಸಿಯಿಂದ ಪಾಠ ಕಲಿಯುವ ಅಗತ್ಯ ಇಲ್ಲ. ಇದು ಕಾಂಗ್ರೆಸ್, ನಿರಂತರವಾಗಿ ಹೋರಾಡುತ್ತಿದೆ. ಆದರೆ ಟಿಎಂಸಿ ಹಲವಾರು ಸಂದರ್ಭಗಳಲ್ಲಿ ಕೇಸರಿ ಪಾಳಯದೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಟಾಂಗ್ ನೀಡಿದ್ದಾರೆ.