ನವದೆಹಲಿ: ಆಸ್ಟ್ರೋಸ್ಯಾಟ್ ಬಾಹ್ಯಾಕಾಶ ದೂರದರ್ಶಕವು ಎಂಟು ವರ್ಷಗಳ ಅವಧಿಯಲ್ಲಿ 600ಕ್ಕೂ ಹೆಚ್ಚು ಗಾಮಾ ರೇ ಸ್ಫೋಟಗಳನ್ನು (ಜಿಆರ್‌ಬಿ) ಪತ್ತೆಹಚ್ಚಿ ಹೊಸ ಮೈಲುಗಲ್ಲು ಸ್ಥಾಪಿಸಿದೆ.
ಪ್ರತಿಯೊಂದು ಗಾಮಾ ರೇ ಸ್ಫೋಟವು ದೊಡ್ಡ ನಕ್ಷತ್ರಗಳ ಸಾವು ಅಥವಾ ನ್ಯೂಟ್ರಾನ್ ನಕ್ಷತ್ರಗಳ ವಿಲೀನದ ವೇಳೆ ಸಂಭವಿಸುತ್ತದೆ.
ಆಸ್ಟ್ರೋಸ್ಯಾಟ್ ಎಂಬುದು ಏಕಕಾಲಕ್ಕೆ ಒಂದೇ ಉಪಗ್ರಹದೊಂದಿಗೆ ಹಲವು ಖಗೋಳ ವಸ್ತುಗಳ ಬಹು ತರಂಗಾಂತರಂಗದ ಆಕಾಶಕಾಯಗಳನ್ನು ವೀಕ್ಷಿಸಲು ರೂಪುಗೊಂಡ ಭಾರತದ ಚೊಚ್ಚಲ ಬಾಹ್ಯಾಕಾಶ ವೀಕ್ಷಣಾಲಯವಾಗಿದೆ.
ಹೊಸ ನಕ್ಷತ್ರಗಳು, ನ್ಯೂಟ್ರಾನ್ ನಕ್ಷತ್ರಗಳ ಹುಟ್ಟು ಹಾಗೂ ಬಾಹ್ಯಾಕಾಶದ ಸ್ಥಿತಿಗತಿಯ ಅಧ್ಯಯನ ನಡೆಸುವುದು ಆಸ್ಟ್ರೋಸ್ಯಾಟ್‌ನ ಮೂಲ ಉದ್ದೇಶವಾಗಿದೆ. 2015ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಬಹು ತರಂಗಾಂತರಂಗ ಉಪಗ್ರಹವಾದ ಆಸ್ಟ್ರೋಸ್ಯಾಟ್ ಅನ್ನು ಉಡ್ಡಯನ ಮಾಡಿತ್ತು.
'ಆಸ್ಟ್ರೋಸ್ಯಾಟ್‌ನಲ್ಲಿ ಇರುವ ಕ್ಯಾಡ್ಮಿಯಮ್ ಜಿಂಕ್ ಟೆಲ್ಲುರೈಡ್ ಇಮೇಜರ್ (ಸಿಝಡ್‌ಟಿಇ) ಎಂಟು ವರ್ಷಗಳ ಬಳಿಕವೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ' ಎಂದು ಸಿಝಡ್‌ಟಿಐನ ಪ್ರಧಾನ ತನಿಖಾಧಿಕಾರಿ ದೀಪಾಂಕರ್ ಭಟ್ಟಾಚಾರ್ಯ ಹೇಳಿದ್ದಾರೆ.
'ಗಾಮಾ ರೇ ಸ್ಫೋಟವು ಬಾಹ್ಯಾಕಾಶದಲ್ಲಿನ ಶಕ್ತಿಯುತ ಸ್ಫೋಟವಾಗಿದೆ. ಸೂರ್ಯ ತನ್ನ ಇಡೀ ಜೀವಿತಾವಧಿಯಲ್ಲಿ ಹೊರಸೂಸುವ ಶಕ್ತಿಯನ್ನು ಈ ಸ್ಫೋಟವು ಕೆಲವೇ ಸೆಕೆಂಡ್‌ಗಳಲ್ಲಿ ಹೊರಸೂಸುತ್ತದೆ' ಎಂದು ಐಐಟಿ-ಬಾಂಬೆ ಸಂಶೋಧನಾ ವಿದ್ಯಾರ್ಥಿ ಗೌರವ್ ವಾರಟ್ಕರ್ ಹೇಳುತ್ತಾರೆ.
ಐದು ವರ್ಷಗಳ ವರೆಗೆ ಮಾತ್ರವೇ ಈ ಉಪಗ್ರಹದ ಕಾರ್ಯ ನಿರ್ವಹಣೆಯ ವಿನ್ಯಾಸ ರೂಪಿಸಲಾಗಿತ್ತು. ಆ ನಂತರವೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಖಗೋಳಶಾಸ್ತ್ರಜ್ಞರು ಆಕಾಶಕಾಯಗಳನ್ನು ವೀಕ್ಷಿಸಲು ಅನುಕೂಲವಾಗಿದೆ.