ಓ ಝೋನ್ ಪದರ ನಾಶಪಡಿಸುವಲ್ಲಿ ಸಿಎಫ್‌ಸಿ CFC - Cloro Floro carbon ಬಳಕೆಯ ಪಾತ್ರ ತಿಳಿದ ನಂತರ ಪರಿಸರವಾದಿಗಳು, ವಿಜ್ಞಾನಿಗಳು 1980ರಲ್ಲಿ ಒಗ್ಗೂಡಿದರು. ಸಿಎಫ್‌ಸಿ ಬಳಕೆಯ1ಐಲ್ವಿಚಾರಣೆ ಮಾಡುವ ಸಚಿವರು ತಮ್ಮ 25ನೇ ಸಭೆಯನ್ನು ಇತ್ತೀಚೆಗೆ ಒಮಾನ್‌ನಲ್ಲಿ ನಡೆಸಿ ಈ ಬಗ್ಗೆ ಹಲವು ವಿಚಾರಗಳಲ್ಲಿ ಒಮ್ಮತಕ್ಕೆ ಬಂದಿರುವುದು ಪರಿಸರ ರಕ್ಷಣೆಯತ್ತ ಮಹತ್ವದ ನಡೆಯಾಗಿದೆ.
ಕಿಗಾಲಿ ತಿದ್ದುಪಡಿ
ಕಿಗಾಲಿ ತಿದ್ದುಪಡಿ ಎಂದರೆ ಓಝೋನ್ ಪದರವನ್ನು ಸವೆ ವಸ್ತುಗಳ ಮೇಲಿನ ಮಾಂಟ್ರಿಯಲ್ ಪ್ರೋಟೋಕಾಲ್ ಗೆ ಮಾಡಿದ ತಿದ್ದುಪಡಿಯಾಗಿದೆ.
2016ರಲ್ಲಿ ಅಂಗೀಕರಿಸಲಾದ ಈ ತಿದ್ದುಪಡಿಯು ಹವಾಮಾನ ಬದಲಾವಣೆ ಮತ್ತು ಪರಿಸರ ಅವನತಿ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಮಾಂಟ್ರಿಯಲ್ ಪ್ರೋಟೋಕಾಲ್
1987ರಲ್ಲಿ ಸಹಿ ಮಾಡಲಾದ ಮಾಂಟ್ರಿಯಲ್ ಪ್ರೋಟೋಕಾಲ್, ಓಝೋನ್-ಡಿಪ್ಲೀಟಿಂಗ್(ಕ್ಷಯಿಸುವ) ವಸ್ತುಗಳ (ODS) ಉತ್ಪಾದನೆ ಮತ್ತು ಬಳಕೆಯನ್ನು ಹಂತಹಂತವಾಗಿ ಕಡಿಮೆಮಾಡುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಒಪ್ಪಂದವಾಗಿದೆ.
ODS ಎಂದರೆ ಅದರಲ್ಲಿ ಬಹುಮುಖ್ಯವಾಗಿ ಕ್ಲೋರೋಫ್ಲೋರೋಕಾರ್ಬನ್‌ಗಳು (CFCಗಳು), ಹ್ಯಾಲೋನ್‌ಗಳು ಮತ್ತು ಕಾರ್ಬನ್ ಟೆಟ್ರಾಕ್ಲೋರೈಡ್‌ಗಳು ಸೇರಿದ್ದು ಸಾಮಾನ್ಯವಾಗಿ ಇವುಗಳನ್ನು ರೆಫ್ರಿಜರೇಟರ್, ಹವಾನಿಯಂತ್ರಣ ಮತ್ತು ಏರೋಸಾಲ್ ಪ್ರೊಪೆಲ್ಲಂಟ್‌ಗಳಲ್ಲಿ ಬಳಸಲಾಗುತ್ತದೆ. ವಾತಾವರಣಕ್ಕೆ ಅವುಗಳ ವಿಸರ್ಜನೆಯು ಓಝೋನ್ ಪದರಕ್ಕೆ ತೀವ್ರವಾದ ಹಾನಿಯನ್ನು ಉಂಟುಮಾಡುತ್ತದೆ. ಓಝೋನ್ ಪದರವು ಹಾನಿಕಾರಕ ನೇರಳಾತೀತ (UV) ವಿಕಿರಣದಿಂದ ಭೂಮಿಯ ಮೇಲಿನ ಜೀವಮಂಡಲವನ್ನು
ರಕ್ಷಿಸುವ ವಾತಾವರಣದ ಮೇಲೆ ತೆಳುವಾಗಿ (ಬಾಹ್ಯಾಕಾಶದ ಸಮೋಷ್ಣಮಂಡಲದಲ್ಲಿ) ಹರಡಲ್ಪಟ್ಟಿರುವ ಜೀವರಕ್ಷಕ ಪರದೆಯಾಗಿದೆ.
ಭಾರತವು ಜೂನ್ 19, 1992 ರಂದು ಓಝೋನ್ ಪದರವನ್ನು ಸವಕಳಿಗೊಳಿಸುವ ವಸ್ತುಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ತರಲಾದ ಮಾಂಟ್ರಿಯಲ್ ಪ್ರೋಟೋಕಾಲ್ ಅನ್ನು ಅಂಗೀಕರಿಸಿದ್ದು ನಂತರದಲ್ಲಿ ಕೂಡಾ ಪ್ರೋಟೋಕಾಲ್‌ಗೆ ಸಂಬಂಧಿಸಿದ ತಿದ್ದುಪಡಿಗಳನ್ನು ಅನುಮೋದಿಸುತ್ತಾ ಬಂದಿದೆ.
ಮಾಂಟ್ರಿಯಲ್ ಪ್ರೋಟೋಕಾಲ್ ನಲ್ಲಿ ವಿವರಿಸಿರುವ ಎಲ್ಲಾ ಓಝೋನ್ ಸವಕಳಿ ಮಾಡುವ ವಸ್ತುಗಳಿಗೆ ಸಂಬಂಧಿಸಿ ನಿಗದಿಮಾಡಲ್ಪಟ್ಟ ಗುರಿಗಳನ್ನು ಭಾರತವು ಪರಿಣಾಮಕಾರಿಯಾಗಿ ಸಾಧಿಸುತ್ತಾ ಬಂದಿದೆ.
ಮಾಂಟ್ರಿಯಲ್ ಒಪ್ಪಂದದ ಯಶಸ್ಸು
ಮಾಂಟ್ರಿಯಲ್ ಒಪ್ಪಂದವು ಇದುವರೆಗೂ ನಡೆಸಲಾದ ಅತ್ಯಂತ ಯಶಸ್ವಿ ಪರಿಸರ ಒಪ್ಪಂದಗಳಲ್ಲಿ ಒಂದಾಗಿದೆ. ODS ಗಳನ್ನು ಜಗತ್ತಿನಾದ್ಯಂತ ಹಂತ-ಹಂತವಾಗಿ ಕಡಿಮೆಗೊಳಿಸಲಾಯಿತು. ಇದು ಗಮನಾರ್ಹವಾದ ಓಝೋನ್ ಪದರದ ಸವಕಳಿಯನ್ನು ತಡೆಯುತ್ತಾ ಬಂದಿತಲ್ಲದೆ ಪರಿಣಾಮವಾಗಿ ಹವಾಮಾನ ವೈಪರೀತ್ಯವನ್ನು ತಗ್ಗಿಸಿತು.
ಅನೇಕ ODS ಗಳು ಪ್ರಬಲವಾದ ಹಸಿರುಮನೆ ಅನಿಲಗಳಾಗಿದ್ದು ಅವುಗಳ ನಿರ್ಮೂಲನೆಯು ಜಾಗತಿಕ ತಾಪಮಾನ ಏರಿಕೆಯ ಮೇಲೆ ಮಹತ್ವದ ಪರಿಣಾಮವನ್ನು ಬೀರಿದೆ.
ಕಿಗಾಲಿ ತಿದ್ದುಪಡಿಯ ಅವಶ್ಯಕತೆ
ಮಾಂಟ್ರಿಯಲ್ ಒಪ್ಪಂದದಲ್ಲಿ ಭಾಗಿಯಾಗಿರುವ ದೇಶಗಳು ಅಕ್ಟೋಬರ್ 2016 ರಲ್ಲಿ ರುವಾಂಡಾದ ಕಿಗಾಲಿಯಲ್ಲಿ ನಡೆದ ಸರ್ವಪಕ್ಷಗಳ 28 ನೇ ಸಭೆಯಲ್ಲಿ (MOP) HFC ಗಳ ಹೆಚ್ಚುತ್ತಿರುವ ಬಳಕೆಯನ್ನು ಗುರುತಿಸಿ (ವಿಶೇಷವಾಗಿ ಶೈತ್ಯೀಕರಣ ಮತ್ತು ಹವಾನಿಯಂತ್ರಣ ವಲಯದಲ್ಲಿ) ಒಂದು ಒಪ್ಪಂದಕ್ಕೆ ಬಂದವು.
ತಮ್ಮ ನಿಯಂತ್ರಿತ ಪದಾರ್ಥಗಳ ಪಟ್ಟಿಯಲ್ಲಿ HFC ಗಳನ್ನು ಸೇರಿಸಿದ್ದಲ್ಲದೇ, 2040 ರ ದಶಕದ ಅಂತ್ಯದ ವೇಳೆಗೆ ಶೇ 80-85ರಷ್ಟು ಕಡಿತವನ್ನು ಗುರಿಯಾಗಿಟ್ಟು
ಕೊಂಡು ಗುರಿಸಾಧನೆಗಾಗಿ ಒಂದು ಗಡುವನ್ನು ನಿಗದಿಪಡಿಸಿಕೊಂಡವು.
ಈ ರಾಷ್ಟ್ರಗಳು ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಉತ್ಪಾದನೆ ಮತ್ತು ಬಳಕೆಯನ್ನು
ಹಂತಹಂತವಾಗಿ ಕಡಿಮೆ ಮಾಡಲು ಬದ್ಧವಾಗಿರುತ್ತವೆ. ಈ HFCಗಳನ್ನು ಓಝೋನ್ ಪದರವನ್ನು
ಸವಕಳಿ ಮಾಡುವ ಪದಾರ್ಥಗಳಿಗೆ ಬದಲಿಯಾಗಿ ಪರಿಚಯಿಸಲಾಗಿತ್ತು.
ಕಿಗಾಲಿ ತಿದ್ದುಪಡಿಗಿಂತ ಹಿಂದಿನ ಮಾಂಟ್ರಿಯಲ್ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲಾ ತಿದ್ದುಪಡಿಗಳು ಕೂಡ ಜಾಗತಿಕ ಬೆಂಬಲವನ್ನು ಪಡೆದಿವೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಭಾರತವು 2021ರಲ್ಲಿ ಮಾಂಟ್ರಿಯಲ್ ಒಪ್ಪಂದಕ್ಕೆ ತರಲಾದ ಕಿಗಾಲಿ ತಿದ್ದುಪಡಿಯನ್ನು ಅಧಿಕೃತವಾಗಿ ಅನುಮೋದಿಸಿತು. ಭಾರತವು ಇದರ ಗುರಿಸಾಧನೆಗಾಗಿ, ನಾಲ್ಕು ಹಂತಗಳಲ್ಲಿ HFC ಗಳನ್ನು ಕಡಿತಗೊಳಿಸುವ
ಟೈಮ್ ಲೈನ್ ಅನ್ನು ಈ ಕೆಳಗಿನಂತೆ ಹಾಕಿಕೊಂಡಿದೆ. 2032ರಲ್ಲಿ ಶೇ 10 , 2037 ರಲ್ಲಿ ಶೇ20 , 2042ರಲ್ಲಿ ಶೇ 30 , ಮತ್ತು ಅಂತಿಮವಾಗಿ 2047ರಲ್ಲಿಶೇ 85ನಷ್ಟು ಕಡಿತಗೊಳಿಸುವ ಗುರಿಯನ್ನು ಹೊಂದಿದೆ.