ಭೋಪಾಲ: ಲೋಕಸಭಾ ಚುನಾವಣೆಗೆ ಮುಂಚಿನ 'ಸೆಮಿಫೈನಲ್' ಎಂದೇ ಪರಿಗಣಿಸಲಾಗಿರುವ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಛತ್ತೀಸಗಢ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ.
ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದ್ದು, ಮತ ಎಣಿಕೆಯ ಕೊನೆಯ ಕ್ಷಣದವರೆಗೂ ಜಿದ್ದಾಜಿದ್ದಿ ಮುಂದುವರಿಯಬಹುದು.
230 ಸದಸ್ಯರ ಬಲಾಬಲದ ಮಧ್ಯಪ್ರದೇಶದಲ್ಲಿ 19 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆಡಳಿತ ವಿರೋಧಿ ಅಲೆ ಹಾಗೂ ಗ್ಯಾರಂಟಿಗಳ ಘೋಷಣೆಯು ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಡಲಿದೆ ಎಂದು ಆ ಪಕ್ಷದ ನಾಯಕರು ಭಾವಿಸಿದ್ದರು. ಆದರೆ, ಕಾಂಗ್ರೆಸ್ಸಿಗರ ನಿರೀಕ್ಷೆ ಹುಸಿಯಾಗಿದೆ.
ಸದ್ಯ ಟ್ರೆಂಡ್ ಗಮನಿಸಿದರೆ 166 ಸ್ಥಾನಗಳಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದರೆ, ಇತ್ತ 63ರಲ್ಲಿ ಕಾಂಗ್ರೆಸ್, ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಧ್ಯಪ್ರದೇಶ ವಿಧಾನಸಭೆಯ ಮ್ಯಾಜಿಕ್ ನಂಬರ್ 116.
ಕಣದಲ್ಲಿದ್ದ ಪ್ರಮುಖ ನಾಯಕರು: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್, ನರೇಂದ್ರ ಸಿಂಗ್ ತೋಮರ್ ಹಾಗೂ ಮಾಜಿ ಸಿಎಂ ಕಾಂಗ್ರೆಸ್ ನಾಯಕ ಕಮಲನಾಥ್ ಅವರು ಕಣಕ್ಕಿಳಿದಿದ್ದರು.
ಮೊದಲ ಜಯ ದಾಖಲಿಸಿದ ಭಾರತ್ ಆದಿವಾಸಿ ಪಾರ್ಟಿ: ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಸೈಲಾನಾ ಕ್ಷೇತ್ರವನ್ನು ಗೆಲ್ಲುವ ಮೂಲಕ ಭಾರತ್ ಆದಿವಾಸಿ ಪಾರ್ಟಿ
ತನ್ನ ಮೊದಲ ಜಯ ದಾಖಲಿಸಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಸೈಲಾನಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕಮಲೇಶ್ವರ ದೊಡಿಯಾರ್ ಅವರು ಪ್ರತಿಸ್ಪರ್ಧಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಹರ್ಷ ವಿಜಯ್ ಗೆಹಲೋತ್ ಅವರನ್ನು 4,618 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ, ಬಿಜೆಪಿ ನಾಯಕ ಶಿವರಾಜ ಸಿಂಗ್ ಚೌಹಾಣ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮ್ ಶರ್ಮಾ ವಿರುದ್ಧ 1,04,974 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸೋತಿರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಪಕ್ಷದ ಸೋಲಿನ ಬಗ್ಗೆ ಅವಲೋಕನ ಮಾಡಿಕೊಳ್ಳುವುದಾಗಿ ಕಾಂಗ್ರೆಸ್ ನಾಯಕ ಕಮಲನಾಥ್ ಹೇಳಿದ್ದಾರೆ.
ಚುನಾವಣೆಯಲ್ಲಾದ ಲೋಪದೋಷಗಳನ್ನು ವಿಶ್ಲೇಷಿಸುತ್ತೇವೆ. ಜತೆಗೆ, ನಮ್ಮ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ನಾವು ವಿಫಲರಾಗದ್ದೇವೆ. ಎಲ್ಲರೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಕಮಲನಾಥ್ ತಿಳಿಸಿದ್ದಾರೆ.