ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವುದು ಬಹುತೇಕ ಖಚಿತವಾಗಿದ್ದು, ಮತಗಟ್ಟೆ ಸಮೀಕ್ಷೆಗಳ 'ಭವಿಷ್ಯ' ನಿಜವಾಗಿದೆ.
ರಾಜಸ್ಥಾನದಲ್ಲಿ ವಿಧಾನಸಭೆಯ 200 ಸ್ಥಾನಗಳ ಪೈಕಿ 199 ಸ್ಥಾನಗಳಿಗೆ ನವೆಂಬರ್ 25ರಂದು ಚುನಾವಣೆ ನಡೆದಿದ್ದು, ಶೇ 68.52 ರಷ್ಟು ಮತದಾನ ಆಗಿತ್ತು.
ಈ ಬಾರಿ ಒಟ್ಟು 1,862 ಅಭ್ಯರ್ಥಿಗಳು ಕಣದಲ್ಲಿದ್ದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಶೇ 74.72ರಷ್ಟು ಮತದಾನವಾಗಿತ್ತು.
ಇಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, 199 ಸ್ಥಾನಗಳ ಪೈಕಿ 113ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ, ಮುಖ್ಯಮಂತ್ರಿ ಅಶೋಕ್ ಗೆಹಲೋತ್ ನೇತೃತ್ವದ ಕಾಂಗ್ರೆಸ್ 71ರಲ್ಲಿ ಹಾಗೂ ಇತರೆ ಪಕ್ಷೇತರ ಅಭ್ಯರ್ಥಿಗಳು 12ರಲ್ಲಿ ಮುನ್ನಡೆ ಸಾಧಿಸಿದ್ದಾರೆ. ರಾಜಸ್ಥಾನ ವಿಧಾನಸಭೆಯ ಮ್ಯಾಜಿಕ್ ನಂಬರ್ 100.
ರಾಜಸ್ಥಾನದ ಮತದಾರರು ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುವ ಸಂಪ್ರದಾಯವನ್ನು 25 ವರ್ಷಗಳಿಂದ ಅನುಸರಿಸಿಕೊಂಡು ಬಂದಿದ್ದಾರೆ. ಈ 'ಸಂಪ್ರದಾಯ' ಈ ಸಲವೂ ಮುಂದುವರಿದೆ.
ರಾಜಸ್ಥಾನದಲ್ಲಿ ಗೆಲ್ಲುವ ವಿಶ್ವಾಸವನ್ನು ಬಿಜೆಪಿ ನಾಯಕರು ಹೊಂದಿದ್ದಾರೆ. ಆದರೆ, ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಬಹುಮತ ಗಳಿಸುವ ವಿಶ್ವಾಸ ಹೊಂದಿದ್ದಾರೆ. ಕೈ ಹಾಗೂ ಕಮಲ ಪಾಳಯಗಳು ಪಕ್ಷೇತರ ಹಾಗೂ ಭಾರತೀಯ ಆದಿವಾಸಿ ಪಕ್ಷದಂತಹ ಸಣ್ಣ ಪಕ್ಷಗಳ ಸಂಭವನೀಯ ವಿಜೇತರ ಜತೆಗೆ ಸಂಪರ್ಕದಲ್ಲಿವೆ.
ಕಣದಲ್ಲಿದ್ದ ಪ್ರಮುಖ ನಾಯಕರು: ರಾಜಸ್ಥಾನ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಅಶೋಕ್ ಗೆಹಲೋತ್, ಸಚಿನ್ ಪೈಲಟ್, ಹಾಗೂ ಬಿಜೆಪಿಯಿಂದ ವಸುಂಧರಾ ರಾಜೇ ಸಿಂಧಿಯಾ ಅವರು ಕಣಕ್ಕಿಳಿದಿದ್ದರು.