ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮುಖ್ಯಸ್ಥ ಶಕ್ತಿಕಾಂತ್ ದಾಸ್ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡಲೇ ರಾಜಿನಾಮೆ ನೀಡದಿದ್ದರೆ ದೇಶದ 11 ಪ್ರದೇಶಗಳಲ್ಲಿ ಸ್ಫೋಟ ನಡೆಸುವುದಾಗಿ ಬೆದರಿಕೆ ಇ-ಮೇಲ್ ಬಂದಿದೆ.
ಆರ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಚೇರಿಗಳ ಮೇಲೆ ಬಾಂಬ್ ದಾಳಿ ನಡೆಸಲಾಗುವುದು… ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ಗೆ ಸೋಮವಾರ ಬಾಂಬ್ ಸ್ಫೋಟ ಬೆದರಿಕೆಯ ಇ-ಮೇಲ್ ಬಂದಿದೆ. ಬೆದರಿಕೆ ಇ- ಮೇಲ್ ಕಳುಹಿಸಿದವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ 1:30ಕ್ಕೆ ಮುಂಬೈನ 11 ಸ್ಥಳಗಳಲ್ಲಿ ಒಟ್ಟು 11 ಬಾಂಬ್ ದಾಳಿಗಳು ನಡೆಯಲಿವೆ ಎಂದು ಇ- ಮೇಲ್ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಇ-ಮೇಲ್‌ನಲ್ಲಿ ಉಲ್ಲೇಖಿಸಲಾದ ಎಲ್ಲಾ ಸ್ಥಳಗಳಿಗೆ ಪೊಲೀಸರು ಭೇಟಿ ನೀಡಿ ತನಿಖೆಯನ್ನೂ ಕೈಗೊಂಡಿದ್ದಾರೆ. ಆದರೆ, ಬಾಂಬ್ ಬೆದರಿಕೆ ಕುರಿತಂತೆ ಏನೂ ಕಂಡುಬಂದಿಲ್ಲ. khilafat.india@gmail.com ಎಂಬ ಇ-ಮೇಲ್ ಐಡಿ ಮೂಲಕ ಬೆದರಿಕೆ ಬಂದಿತ್ತು. ಮುಂಬೈನ ಎಂಆರ್‌ಎ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
ಇ-ಮೇಲ್ ಜಾಡು ಹಿಡಿದಿ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.