ನವದೆಹಲಿ: 'ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ಕಾರ್ಯಕ್ರಮದಲ್ಲಿ ಬಾಬಾ ಪಾಲ್ಗೊಳ್ಳುವ ಕುರಿತು ಕೆಲ ದಿನಗಳ ಕಾಲ ನಾನು ಅವರೊಂದಿಗೆ ಜಗಳವಾಡಿದ್ದೆ' ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪುತ್ರಿ ಶರ್ಮಿಷ್ಠ ಮುಖರ್ಜಿ ಹೇಳಿದ್ದಾರೆ.
'ಪ್ರಣಬ್ ಮೈ ಫಾದರ್: ಎ ಡಾಟರ್ ರಿಮೆಂಬರ್ಸ್' ಎಂಬ ಕೃತಿ ಬಿಡುಗಡೆ ಸಂದರ್ಭದಲ್ಲಿ ಕೃತಿಯಲ್ಲಿ ಕೆಲ ಅಂಶಗಳನ್ನು ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ.
'ಸುಮಾರು ನಾಲ್ಕು ದಿನಗಳ ನಂತರ ಒಂದು ದಿನ ಪ್ರತಿಕ್ರಿಯಿಸಿದ ಅವರು, ಈ ದೇಶವೇ ನಮಗೆ ಇಂಥದ್ದೊಂದು ಅವಕಾಶ ನೀಡಿದೆ. ಪ್ರಜಾಪ್ರಭುತ್ವ ಎಂಬುದರ ಅರ್ಥವೇ ಮಾತುಕತೆ. ವಿರೋಧಪಕ್ಷದವರೊಂದಿಗೆ ಏನೇ ವಿವಾದವಿದ್ದರೂ ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂಬುದನ್ನು ತಂದೆಯವರು ನಂಬಿದ್ದರು' ಎಂದು ಶರ್ಮಿಷ್ಠ ಹೇಳಿದ್ದಾರೆ.
ಇಂದಿರಾಗಾಂಧಿ ಜೊತೆ ಕೆಲಸ ಮಾಡಿದ್ದು ಸುವರ್ಣ ಕಾಲ
'ಓಲೈಸುವ ಮನೋಭಾವದವರಲ್ಲದ ಕಾರಣ ರಾಜೀವ್ ಗಾಂಧಿ ಅವರು ತಮ್ಮ ಸಂಪುಟದಲ್ಲಿ ತಂದೆಯವರಿಗೆ ಅವಕಾಶ ನೀಡಲಿಲ್ಲ. ಆದರೆ ಇಂದಿರಾ ಗಾಂಧಿ ಅವರೊಂದಿಗೆ ಕೆಲಸ ಮಾಡಿದ ದಿನಗಳು ಸುವರ್ಣ ಕಾಲ ಎಂದು ಬಾಬಾ ಸದಾ ಹೇಳುತ್ತಿದ್ದರು' ಎಂದು ಶರ್ಮಿಷ್ಠ ಮುಖರ್ಜಿ ಹೇಳಿದ್ದಾರೆ.
'ತಂದೆಯವರು ಬರೆಯುತ್ತಿದ್ದ ಡೈರಿ ಆಧರಿಸಿ ಈ ಪುಸ್ತಕವನ್ನು ರಚಿಸಲಾಗಿದೆ. ಅವರ ಜನ್ಮದಿನದ ಅಂಗವಾಗಿ ಪುಸ್ತಕ ಬಿಡುಗಡೆ ಮಾಡಲಾಗಿದೆ' ಎಂದು ಶರ್ಮಿಷ್ಠ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹಾಗೂ ಬಿಜೆಪಿ ಮುಖಂಡ ವಿಜಯ ಗೋಯಲ್ ಇದ್ದರು.
ಪುಸ್ತಕದಲ್ಲಿ ವಿವಾದಾತ್ಮಕ ಎನ್ನಬಹುದಾದ ರಾಹುಲ್ ಗಾಂಧಿ ಕುರಿತ ಕೆಲ ಸಂಗತಿಗಳ ಕುರಿತೂ ಶರ್ಮಿಷ್ಠ ಬೆಳಕು ಚೆಲ್ಲಿದರು. 2013ರ ಸೆಪ್ಟೆಂಬರ್‌ನಲ್ಲಿ ಪ್ರಸ್ತಾಪವಾಗಿದ್ದ ಸುಗ್ರೀವಾಜ್ಞೆಯನ್ನು ತಂದೆಯವರು ವಿರೋಧಿಸಿದ್ದರು. ಇಂಥ ವಿಷಯಗಳು ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂದು ತಂದೆಯವರು ಬಯಸಿದ್ದರು. ಆದರೆ ಸುದ್ದಿಗೋಷ್ಠಿಯೊಂದರಲ್ಲಿ ರಾಹುಲ್ ಗಾಂಧಿ ಪ್ರತಿಯನ್ನು ಹರಿದುಹಾಕಿದ್ದರು' ಎಂದಿದ್ದಾರೆ.
'ಶಿಕ್ಷೆಗೆ ಗುರಿಯಾದ ಸಂಸದರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಸುಪ್ರೀಂ ಕೋರ್ಟ್‌ನ ಆದೇಶವನ್ನು ಸುಗ್ರೀವಾಜ್ಞೆ ಉಲ್ಲಂಘಿಸುವಂತಿತ್ತು. ಆದರೆ ಮೇಲಿನ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ಸದಸ್ಯರು ತಮ್ಮ ಸ್ಥಾನದಲ್ಲಿ ಮುಂದುವರಿಯಬಹುದು ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿತ್ತು' ಎಂದು ನೆನಪಿಸಿಕೊಂಡಿದ್ದಾರೆ.
ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಒಂದು ತಂಡವಾಗಿ ಅವರು ಕೆಲಸ ಮಾಡಿದ್ದನ್ನು ಸದಾ ನೆನಪಿಸಿಕೊಳ್ಳುತ್ತಿದ್ದರು ಎಂದು ಶರ್ಮಿಷ್ಠ ಹೇಳಿದ್ದಾರೆ.
'ರಾಹುಲ್ ಗಾಂಧಿ ಕುರಿತು ಕೆಲವೇ ಕೆಲವು ಅಂಶಗಳು ಪುಸ್ತಕದಲ್ಲಿ ದಾಖಲಾಗಿವೆ. ಸಂಸತ್ತಿನಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ್ದೇ ಕಾಂಗ್ರೆಸ್. ಅದನ್ನು ಉಳಿಸಿಕೊಳ್ಳುವುದು ಪಕ್ಷದ ಕೈಯಲ್ಲಿದೆ ಎಂದು ತಂದೆಯವರು ಸದಾ ಹೇಳುತ್ತಿದ್ದರು' ಎಂದಿದ್ದಾರೆ.
ಪುಸ್ತಕ ಕುರಿತ ಟೀಕೆಗಳ ಇವೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿದ ಮುಖರ್ಜಿ, 'ಅಂಥ ಯಾವುದೇ ಟೀಕೆಗಳು ಬಂದಿಲ್ಲ. ಆದರೆ ಚಿದಂಬರಂ ಹೊರತುಪಡಿಸಿದರೆ ಕಾಂಗ್ರೆಸ್‌ನ ಉಳಿದ ನಾಯಕರು ಪ್ರತಿಕ್ರಿಯಿಸದಿರುವುದು ನೋವು ತಂದಿದೆ' ಎಂದಿದ್ದಾರೆ.
ಇಂದಿರಾ ಹತ್ಯೆಯ ನಂತರ ರಾಜೀವ್ ಪ್ರಧಾನಿಯಾಗುವುದನ್ನು ಪ್ರಣವ್ ವಿರೋಧಿಸಿದ್ದರೇ?
ಇಂದಿರಾ ಗಾಂಧಿ ಹತ್ಯೆಯ ನಂತರ ರಾಜೀವ್ ಗಾಂಧಿ ಪ್ರಧಾನಿಯಾಗುವುದನ್ನು ಪ್ರಣವ್ ವಿರೋಧಿಸಿದ್ದರೇ ಎಂಬ ಪ್ರಶ್ನೆಗೆ ಉತ್ತರಿಸಿದ ಶರ್ಮಿಷ್ಠ, 'ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹೆಣೆದ ಕಥೆ ಇದು. ಅದು ರಾಜೀವ್ ಗಾಂಧಿ ಹಾಗೂ ತಂದೆಯವರ ನಡುವೆ ಕಂದಕ ಸೃಷ್ಟಿಸುವ ಹುನ್ನಾರವಾಗಿತ್ತು. ಇದಕ್ಕೆ ಮುಖ್ಯ ಕಾರಣ ತಂದೆಯವರು ನೇರ, ನಿಷ್ಠೂರದ ಸ್ವಭಾವದವರಾಗಿದ್ದರು. ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳದೆ ರಾಜೀವ್ ಒಳ್ಳೆಯ ಕೆಲಸ ಮಾಡಿದ್ದರು. ಇಲ್ಲವಾದಲ್ಲಿ ಅವರಿಗೆ ನಾನೊಬ್ಬ ಕಬ್ಬಿಣದ ಕಡಲೆಯಾಗಿರುತ್ತಿದೆ ಎಂದು ತಂದೆಯವರೇ ಮುಂದೊಮ್ಮೆ ಹೇಳಿದ್ದರು' ಎಂದು ಪ್ರತಿಕ್ರಿಯಿಸಿದರು.
1986 ಜನವರಿಯಲ್ಲಿ ಮುಖರ್ಜಿ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಿಂದ ಕೈಬಿಡಲಾಗಿತ್ತು. ನಂತರ ಕೆಲ ತಿಂಗಳಲ್ಲೇ ಅವರನ್ನು ಪಕ್ಷದಿಂದಲೂ ಉಚ್ಛಾಟಿಸಲಾಗಿತ್ತು. ಇದರಿಂದ ತೀವ್ರ ಬೇಸರಗೊಂಡಿದ್ದ ಅವರು ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು. ಆದರೆ ಕೆಲವೇ ಸಮಯದಲ್ಲಿ ಅವರು ಕಾಂಗ್ರೆಸ್‌ಗೆ ಮರಳಿದ್ದರು.
ಪಿ.ವಿ.ನರಸಿಂಹರಾವ್ ಸಂಪುಟದಲ್ಲಿ ಸ್ಥಾನ ನೀಡದೆ, ಯೋಜನಾ ಆಯೋಗದ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ಸೂಚಿಸಿದಾಗ ಪ್ರಣವ್ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬುದರ ಕುರಿತು ಪುಸ್ತಕದಲ್ಲಿದೆ. ಜತೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗಿನ ಒಡನಾಟವನ್ನೂ ದಾಖಲಿಸಲಾಗಿದೆ ಎಂದಿದ್ದಾರೆ.
ರಾಷ್ಟ್ರಪತಿ ಸ್ಥಾನಕ್ಕೆ ಪ್ರಣವ್ ಹೆಸರು ಮೊದಲಿತ್ತೇ...?
'ಮನಮೋಹನ್ ಸಿಂಗ್ ಅವರಲ್ಲಿ ಸೌಜನ್ಯವಿತ್ತು. ಜತೆಗೆ ಇಬ್ಬರ ನಡುವೆಯೂ ಭಲವಾದ ಪರಸ್ಪರ ಗೌರವವಿತ್ತು. ಇಬ್ಬರ ನಡುವಿನ ವ್ಯತ್ಯಾಸಗಳನ್ನು ನಿರ್ವಹಿಸುವ ಕಲೆಯನ್ನು ಇಬ್ಬರೂ ಬಲ್ಲವರಾಗಿದ್ದರು. ಡಾ. ಸಿಂಗ್ ಅವರ ಸಂಪುಟದಲ್ಲಿ ರಕ್ಷಣಾ ಇಲಾಖೆ, ವಿದೇಶಾಂಗ ಹಾಗೂ ಹಣಕಾಸು ಇಲಾಖೆಯ ಹೊಣೆಯನ್ನು ಬಾಬಾ ಹೊತ್ತಿದ್ದರು' ಎಂದು ಶರ್ಮಿಷ್ಠ ಹೇಳಿದ್ದಾರೆ.
ರಾಷ್ಟ್ರಪತಿಯಾಗಿ ಪ್ರಣವ್ ಮುಖರ್ಜಿ ಮೊದಲ ಆಯ್ಕೆಯಾಗಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಶರ್ಮಿಷ್ಠ, 'ಅದು ನನಗೆ ಗೊತ್ತಿಲ್ಲ. ಆದರೆ ಬಾಬಾ ಅವರ ಡೈರಿಯಿಂದ ತಿಳಿದಿದ್ದೇನೆಂದರೆ, ಸೋನಿಯಾ ಗಾಂಧಿ ಅವರು ಹಮೀದ್ ಅನ್ಸಾರಿ ಅವರ ಗೆಲುವಿನ ಸಾಧ್ಯತೆ ಕುರಿತು ವಿಚಾರ ಮಾಡುತ್ತಿದ್ದರು ಎಂಬುದಷ್ಟೇ ಗೊತ್ತು' ಎಂದಿದ್ದಾರೆ.