ಹೈದರಾಬಾದ್: ಮತಗಟ್ಟೆ ಸಮೀಕ್ಷೆಗಳ 'ಭವಿಷ್ಯ' ನಿಜವಾಗಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗುವುದು ಪಕ್ಕಾ ಆಗಿದೆ.
ಇಂದು ಮತ ಎಣಿಕೆ ನಡೆಯುತ್ತಿದ್ದು, 63 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದರೆ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷವು 40, ಬಿಜೆಪಿ 9ರಲ್ಲಿ ಹಾಗೂ 7ರಲ್ಲಿ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. 119 ಸ್ಥಾನಗಳಲ್ಲಿ 60 ರಿಂದ 70 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು.
2018ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ 119 ಸ್ಥಾನಗಳ ಪೈಕಿ 88ರಲ್ಲಿ ಬಿಆರ್‌ಎಸ್ ಗೆಲುವು ಕಂಡಿತ್ತು (ಶೇ 46.87ರಷ್ಟು ಮತ ಪಡೆಯಿತು). ಕಾಂಗ್ರೆಸ್ ಪಕ್ಷವು 19 ಸ್ಥಾನಗಳೊಂದಿಗೆ (ಶೇ 28.43ರಷ್ಟು ಮತ) ಎರಡನೆಯ ಸ್ಥಾನ ಪಡೆದಿತ್ತು. ಎಐಎಂಐಎಂ ಪಕ್ಷ 7 ಸ್ಥಾನ (ಶೇ 2.71ರಷ್ಟು ಮತ), ಬಿಜೆಪಿ 1 ಸ್ಥಾನ (ಶೇ 6.98ರಷ್ಟು ಮತ) ಪಡೆದಿದ್ದವು. ಇತರರು 4 ಸ್ಥಾನ (ಶೇ 15.01ರಷ್ಟು ಮತ) ಪಡೆದಿದ್ದರು. ಈ ಚುನಾವಣೆಯಲ್ಲಿ ಒಟ್ಟಾರೆ ಶೇ 73.7ರಷ್ಟು ಮತದಾನ ನಡೆದಿತ್ತು. ತೆಲಂಗಾಣ ವಿಧಾನಸಭೆಯ ಮ್ಯಾಜಿಕ್ ನಂಬರ್ 60.
ಕಣದಲ್ಲಿದ್ದ ಪ್ರಮುಖ ನಾಯಕರು: ತೆಲಂಗಾಣ ಮುಖ್ಯಮಂತ್ರಿ, ಬಿಆರ್‌ಎಸ್ ನಾಯಕ ಕೆ.ಚಂದ್ರಶೇಖರ್ ರಾವ್, ಬಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ, ಕೆಸಿಆರ್ ಪುತ್ರ ಕೆ.ಟಿ.ರಾಮ ರಾವ್, ಕಾಂಗ್ರೆಸ್‌ನಿಂದ ಎ. ರೇವಂತ್ ರೆಡ್ಡಿ ಹಾಗೂ ಬಿಜೆಪಿಯಿಂದ ಬಂಡಿ ಸಂಜಯ್‌ಕುಮಾರ್ ಅವರು ಕಣಕ್ಕಿಳಿದಿದ್ದರು.
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು.
ತೆಲಂಗಾಣ ಮುಖ್ಯಮಂತ್ರಿ ಸ್ಥಾನಕ್ಕೆ ಕೆ.ಚಂದ್ರಶೇಖರ್ ರಾವ್ ರಾಜೀನಾಮೆ ಸಲ್ಲಿಸಿದ್ದಾರೆ.
ಕೆಸಿಆರ್ ವಿರುದ್ಧ ಗೆದ್ದಿರುವ ರೇವಂತ್ ರೆಡ್ಡಿ ಅವರು ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆ.
ತೆಲಂಗಾಣದಲ್ಲಿ ಈ ಬಾರಿ ಮೂವರು ಕಾಂಗ್ರೆಸ್ ಸಂಸದರು ಗೆಲುವು ಸಾಧಿಸಿದ್ದಾರೆ. ಇತ್ತ ಬಿಜೆಪಿಯ ಮೂವರು ಸಂಸದರು ಸೋಲು ಕಂಡಿದ್ದಾರೆ.
ನಾಗಾರ್ಜುನ ಸಾಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಂದೂರು ಜಯವೀರ್ 55 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.