ತಿರುವನಂತಪುರಂ: 2013ರಲ್ಲಿ ಉಮ್ಮನ್ ಚಾಂಡಿ ಸರ್ಕಾರವೇ ಎಸ್ ಎಸ್ ಎಲ್ ಸಿ ಮಾದರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ 10 ರೂ.ಪಡೆದಿತ್ತು. ಆ ಕಾಲದಲ್ಲಿ ಪಿ. ಕೆ. ಅಬ್ದುರ್ರಬ್ಬ್ ಶಿಕ್ಷಣ ಸಚಿವರಾಗಿದ್ದರು. ಆಗ ಪ್ರತಿ ಅಭ್ಯರ್ಥಿಯಿಂದ ಹತ್ತು ರೂಪಾಯಿ ಶುಲ್ಕವನ್ನು ಸಂಬಂಧಪಟ್ಟ ಮುಖ್ಯೋಪಾಧ್ಯಾಯರ ಮೂಲಕ ವಸೂಲಿ ಮಾಡುವಂತೆ ಸೂಚನೆ ನೀಡಲಾಗಿತ್ತು ಎಂದು ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ತಿಳಿಸಿದರು.
ರಾಜ್ಯದ ವಿವಿಧ ಸರ್ಕಾರಿ ಮುದ್ರಣಾಲಯಗಳಲ್ಲಿ ಮಾದರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಿ ಜಿಲ್ಲಾ ಶಿಕ್ಷಣಾಧಿಕಾರಿಗಳ ಮೂಲಕ ಶಾಲೆಗಳಿಗೆ ವಿತರಿಸುವ ಪರಿಪಾಠ ಹಲವು ವರ್ಷಗಳಿಂದ ಇದೆ. ಎಸ್.ಸಿ, ಎಸ್ ಟಿ, ಒಬಿಸಿ ವರ್ಗಗಳು ಮತ್ತು ಅನಾಥರನ್ನು ಹೊರತುಪಡಿಸಿ ಶುಲ್ಕ ರಿಯಾಯಿತಿಗೆ ಅರ್ಹತೆ ಹೊಂದಿರದ ಅಭ್ಯರ್ಥಿಗಳಿಂದ ರೂ.10/- ಶುಲ್ಕವನ್ನು ಸಂಗ್ರಹಿಸಲಾಗುತ್ತದೆ.
ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಪ್ರಕ್ರಿಯೆಯನ್ನು ಈ ವರ್ಷವೂ ಮುಂದುವರಿಸಲಾಗಿದೆ. ಇನ್ನು, ಅಬ್ದು ರಬ್ಬ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದು ಅವಾಸ್ತವ ವಿಷಯವಾಗಿದ್ದು, ಆಗಿನ ಶಿಕ್ಷಣ ಸಚಿವರು ತಮ್ಮದೇ ಇಲಾಖೆಯಲ್ಲಿ ಏನಾಗುತ್ತಿದೆ ಎಂಬ ಅರಿವೂ ಇಲ್ಲದ ವ್ಯಕ್ತಿಯಾಗಿದ್ದಾರೆ ಎಂದು ಶಿವನ್ ಕುಟ್ಟಿ ಲೇವಡಿ ಮಾಡಿರುವರು.