ಇಸ್ಲಾಮಾಬಾದ್: ದೇಶಕ್ಕೆ ಸಂಬಂಧಿಸಿದ ರಹಸ್ಯ ದಾಖಲೆ ಸೋರಿಕೆ (ಸೈಫರ್ ಪ್ರಕರಣ) ಪ್ರಕರಣ ಎದುರಿಸುತ್ತಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಮಂಗಳವಾರ ಆದೇಶಿಸಿದೆ.
ಫೆಬ್ರುವರಿ 8ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನವೇ ಈ ತೀರ್ಪು ಹೊರಬಿದ್ದಿದೆ.
ಅಧಿಕೃತ ರಹಸ್ಯ ಕಾಯಿದೆಯಡಿ ಸ್ಥಾಪಿಸಲಾದ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿರುವ ವಿಶೇಷ ನ್ಯಾಯಾಲಯದಲ್ಲಿ ನಡೆದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಬುಲ್ ಹಸ್ನತ್ ಜುಲ್ಕರ್ನೈನ್ ಅವರು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಮಾರ್ಚ್ 2022 ರಲ್ಲಿ ವಾಷಿಂಗ್ಟನ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯು ಕಳುಹಿಸಿದ ಕೇಬಲ್ ಸಂದೇಶವನ್ನು ಬಹಿರಂಗಗೊಳಿಸಿ ಗೌಪ್ಯತೆಯ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿಯು ಕಳೆದ ವರ್ಷ ಆಗಸ್ಟ್ 15 ರಂದು ಇಮ್ರಾನ್ ಖಾನ್ ಮತ್ತು ಖುರೇಶಿ ವಿರುದ್ಧ ಪ್ರಕರಣ ದಾಖಲಿಸಿತ್ತು.
ಇಮ್ರಾನ್ ಖಾನ್ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಈಗಾಗಲೇ ಮೂರು ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.