ಬೀಜಿಂಗ್: ನೈಋತ್ಯ ಚೀನಾದ ಪರ್ವತ ಪ್ರದೇಶ ಯುನಾನ್ ಪ್ರಾಂತ್ಯದಲ್ಲಿ ಸೋಮವಾರ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಬೆಳಿಗ್ಗೆ 5:51ಕ್ಕೆ(ಸ್ಥಳೀಯ ಕಾಲಮಾನ) ಝಾಟೊಂಗ್ ನಗರದ ಲಿಯಾಂಗ್‌ಶುಯಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭೂಕುಸಿತದಲ್ಲಿ ವಿವಿಧ ಕುಟುಂಬಗಳ ಸುಮಾರು 50 ಜನರು ನಾಪತ್ತೆಯಾಗಿದ್ದು, ಅವರಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಆರಂಭದಲ್ಲಿ 8 ಜನರು ಮೃತಪಟ್ಟಿದ್ದಾಗಿ ವರದಿಯಾಗಿತ್ತು.
500ಕ್ಕೂ ಹೆಚ್ಚು ನಿವಾಸಿಗಳ ಸ್ಥಳಾಂತರ:
ಸದ್ಯ ವಿಪತ್ತು ಪರಿಹಾರ ಪ್ರಾಂತೀಯ ಆಯೋಗವು 3 ಹಂತಗಳಲ್ಲಿ ತುರ್ತು ಕಾರ್ಯಾಚರಣೆ ಆರಂಭಿಸಿದೆ. 500ಕ್ಕೂ ಹೆಚ್ಚು ನಿವಾಸಿಗಳನ್ನು ಭೂಕುಸಿತ ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿವೆ ಎಂದು ಅಧಿಕೃತ ಮಾಧ್ಯಮಗಳು ವರದಿ ಮಾಡಿದೆ.
ಒಟ್ಟು 795 ರಕ್ಷಣಾ ಕಾರ್ಯಕರ್ತರು, ಒಂದು ಡ್ರೋನ್, ಮಣ್ಣು ಅಗೆಯುವ ಯಂತ್ರಗಳು, ಲೋಡರ್‌ಗಳು ಮತ್ತು ಸಾರಿಗೆ ವಾಹನಗಳು ಸೇರಿದಂತೆ 120 ವಾಹನಗಳು ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯ ನಡೆಸುತ್ತಿವೆ.
ನಾಪತ್ತೆಯಾದವರ ಪತ್ತೆಗಾಗಿ 33 ಅಗ್ನಿಶಾಮಕ ವಾಹನಗಳು ಮತ್ತು 10 ಲೋಡಿಂಗ್ ಯಂತ್ರಗಳನ್ನು ಸಹ ಬಳಸಲಾಗುತ್ತಿದೆ.
ಭೂಕುಸಿತದಲ್ಲಿ ನಾಪತ್ತೆಯಾಗಿರುವರ ತುರ್ತು ರಕ್ಷಣೆಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಆದೇಶಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.