ಕಾಸರಗೋಡು: ಕನೆಕ್ಟಿಂಗ್ ಕಾಸರಗೋಡು ಯೋಜನೆಗೆ ಎಲ್ಲ ಇಲಾಖೆಗಳಿಂದ ಆಯ್ಕೆಯಾದ ನೋಡಲ್ ಅಧಿಕಾರಿಗಳಿಗೆ ಜ.12ರಂದು ಮಂಗಳವಾರ ಬೆಳಗ್ಗೆ 11ರಿಂದ ತರಬೇತಿ ಆಯೋಜಿಸಲಾಗಿದ್ದು, ಜ.15ರಂದು ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿರುವರು. ಜಿಲ್ಲೆಯಲ್ಲಿ ಸಂಪೂರ್ಣ ಡಿಜಿಟಲೀಕರಣ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಹಾಗೂ ಐಟಿ ಮಿಷನ್ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕನೆಕ್ಟಿಂಗ್ ಕಾಸರಗೋಡು ಪರಿಶೀಲನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಇ-ಜಿಲ್ಲಾ ಕುಂದುಕೊರತೆ ನಿವಾರಣಾ ವ್ಯವಸ್ಥೆಗೆ ಚಾಲನೆ ನೀಡಲು ಎಲ್ಲ ಇಲಾಖೆಗಳಿಂದ ಒಬ್ಬ ನೋಡಲ್ ಅಧಿಕಾರಿಯನ್ನು ಆಯ್ಕೆ ಮಾಡಲು ಕಳೆದ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇಂದು (ಜನವರಿ 9) ಸಂಜೆ 5 ಗಂಟೆಯೊಳಗೆ ಎಲ್ಲ ಇಲಾಖೆಗಳ ಮುಖ್ಯಸ್ಥರು ನೋಡಲ್ ಅಧಿಕಾರಿ ನೇಮಕದ ಬಗ್ಗೆ ಮಾಹಿತಿ ನೀಡುವಂತೆ ಸಭೆ ಸೂಚಿಸಲಾಗಿದೆ. ಪ್ರಸ್ತುತ ನೇಮಕಗೊಂಡ ವ್ಯಕ್ತಿಗಳಲ್ಲಿ ಯಾವುದೇ ಬದಲಾವಣೆಯನ್ನು ಕಾಲಮಿತಿಯೊಳಗೆ ಮಾಡಬೇಕು.
ಜಿಲ್ಲೆಯಲ್ಲಿ ಇ-ಕಚೇರಿ ಅಳವಡಿಸಿರುವ ಇಲಾಖೆಗಳು ತಮ್ಮ ಕಡತ ವರ್ಗಾವಣೆಯನ್ನು ಸಂಪೂರ್ಣವಾಗಿ ಇ-ಕಚೇರಿ ಮೂಲಕ ಜಾರಿಗೊಳಿಸಬೇಕು. ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿದ ಕಡತಗಳು, ನಡಾವಳಿಗಳು ಮತ್ತು ಇತರ ದಾಖಲೆಗಳನ್ನು ಇ-ಕಚೇರಿ ಮೂಲಕ ಕಳುಹಿಸುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಇ-ಕಚೇರಿ ಅಳವಡಿಸದ ಇಲಾಖೆಗಳು ಎರಡು ತಿಂಗಳೊಳಗೆ ವ್ಯವಸ್ಥೆ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಶೇ.34ರಷ್ಟು ಕಚೇರಿಗಳಲ್ಲಿ ಕೆ ಪೋನ್ ಸಂಪರ್ಕವಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದಾಗಿ 118 ಕಚೇರಿಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಸುಮಾರು 325 ಶಿಬಿರಗಳನ್ನು ಆಯೋಜಿಸಲಾಗಿದೆ ಮತ್ತು ಆಧಾರ್ ಅರ್ಹತೆಗೆ ಸಂಬಂಧಿಸಿದಂತೆ 22000 ಆಧಾರ್ ಸೇವೆಗಳನ್ನು ಒದಗಿಸಲಾಗಿದೆ. ಜ.21ರಂದು ಕುಟ್ಟಿಕೋಲ್ ಪಂಚಾಯಿತಿಯಲ್ಲಿ ಎಬಿಸಿಡಿ ಶಿಬಿರ ಆಯೋಜಿಸಲಾಗಿದೆ ಎಂದು ಯೋಜನಾ ವ್ಯವಸ್ಥಾಪಕರು ಸಭೆಯಲ್ಲಿ ತಿಳಿಸಿದರು.
ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ.ಕೈನಿಕರ, ಐಟಿ ಮಿಷನ್ ಜಿಲ್ಲಾ ಕಾರ್ಯಕ್ರಮ ನಿರ್ವಾಹಕ ಕಪಿಲ್ ದೇವ್, ನೋಡಲ್ ಅಧಿಕಾರಿ ಪಿ.ಶಿಬು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು.