ನವದೆಹಲಿ: ಹಿಂದಿನ ವರ್ಷಗಳಿಗೆ ಹೋಲಿಸಿದರೆ 2022-23ರ ಆರ್ಥಿಕ ವರ್ಷದಲ್ಲಿ ದೆಹಲಿಯಲ್ಲಿ ತಲಾ ಆದಾಯ ಶೇ 14ರಷ್ಟು ಏರಿಕೆಯಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ (2022-23) ದೆಹಲಿಯಲ್ಲಿ ತಲಾ ಆದಾಯವು ₹ 3,89,529 ರಿಂದ ₹ 4,44,768 ಕ್ಕೆ ಏರಿಕೆಯಾಗಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಶೇ 158 ರಷ್ಟು ಹೆಚ್ಚಾಗಿದೆ ಎಂದು ಕೇಜ್ರಿವಾಲ್ ಸರ್ಕಾರ ಹೇಳಿದೆ.
ದೆಹಲಿ ಸರ್ಕಾರದ ಆರ್ಥಿಕ ಮತ್ತು ಅಂಕಿಅಂಶ ವಿಭಾಗವು ರಾಷ್ಟ್ರ ರಾಜಧಾನಿಯ ಸಾಮಾಜಿಕ-ಆರ್ಥಿಕ ನಿಯತಾಂಕಗಳ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯನ್ನು ಶನಿವಾರ ಬಿಡುಗಡೆ ಮಾಡಿದೆ.
ಅಂಕಿಅಂಶಗಳ ಕೈಪಿಡಿ ಬಿಡುಗಡೆ ವೇಳೆ ಮಾತನಾಡಿದ ಯೋಜನಾ ಇಲಾಖೆ ಸಚಿವೆ ಅತಿಶಿ, 'ವಿವಿಧ ಅಡೆತಡೆಗಳ ನಡುವೆಯೂ, ಸರ್ಕಾರ 2023ರಲ್ಲಿ ಸಾರ್ವಜನಿಕ ಸೇವಾ ವಲಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ' ಎಂದು ಹೇಳಿದರು.
ಕೇಜ್ರಿವಾಲ್ ಸರ್ಕಾರ ರಾಜಧಾನಿಯಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಗಣನೀಯವಾಗಿ ಸುಧಾರಿಸಿದೆ. 2023 ರಲ್ಲಿ ಪ್ರತಿದಿನ ಸುಮಾರು 41 ಲಕ್ಷ ಪ್ರಯಾಣಿಕರು ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ದೆಹಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯಲ್ಲಿ ಕ್ರಾಂತಿಯನ್ನು ಮಾಡಿದೆ. ನಗರದಲ್ಲಿ ಪ್ರಸ್ತುತ 1,300 ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ 7,200 ಬಸ್‌ಗಳು ಸಂಚರಿಸುತ್ತಿವೆ ಎಂದು ದೆಹಲಿ ಸರ್ಕಾರ ತಿಳಿಸಿದೆ.
ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯ ಹೊರತಾಗಿಯೂ, ಕೇಜ್ರಿವಾಲ್ ಸರ್ಕಾರ ದೆಹಲಿಯ ನಿವಾಸಿಗಳಿಗೆ ನಿರಂತರವಾಗಿ ವಿದ್ಯುತ್ ಅನ್ನು ಪೂರೈಸಿದೆ. ದೆಹಲಿಯು ದೇಶದಲ್ಲೇ ಅತ್ಯಧಿಕ ಕನಿಷ್ಠ ವೇತನವನ್ನು ಹೊಂದಿದೆ. ಕೌಶಲ್ಯರಹಿತರಿಗೆ ₹17,494, ಅರೆ ಕೌಶಲ್ಯದವರಿಗೆ ₹19,279 ಮತ್ತು ಕುಶಲ ಕಾರ್ಮಿಕರಿಗೆ ₹21,215. ಜತೆಗೆ ಸರ್ಕಾರ ಪ್ರತಿ ಆರು ತಿಂಗಳಿಗೊಮ್ಮೆ ಈ ವೇತನವನ್ನು ಹೆಚ್ಚಿಸುತ್ತದೆ ಎಂದು ಅತಿಶಿ ಹೇಳಿದ್ದಾರೆ.
ಹಿರಿಯರು, ಹೆಣ್ಣು ಮಕ್ಕಳು ಮತ್ತು ವಿಶೇಷ ಚೇತನರ ಆರೈಕೆಗೆ ಸರ್ಕಾರ ಆದ್ಯತೆ ನೀಡುತ್ತದೆ. 4 ಲಕ್ಷಕ್ಕೂ ಹೆಚ್ಚು ವೃದ್ಧರಿಗೆ ಪಿಂಚಣಿ ನೀಡುತ್ತಿದೆ. ಲಾಡ್ಲಿ ಯೋಜನೆಯಡಿ 1.7 ಲಕ್ಷ ಹೆಣ್ಣುಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ. 1.13 ಲಕ್ಷ ವಿಶೇಷ ಚೇತನ ವ್ಯಕ್ತಿಗಳಿಗೆ ಆರ್ಥಿಕ ನೆರವು ನೀಡುತ್ತದೆ.
2022-23ರಲ್ಲಿ ಮುಖ್ಯಮಂತ್ರಿಗಳ ಕೋವಿಡ್-19 ಕುಟುಂಬ ಆರ್ಥಿಕ ನೆರವು ಯೋಜನೆಯಡಿ 11,570 ವ್ಯಕ್ತಿಗಳು ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.