ನವದೆಹಲಿ: ಜನವರಿ 26ರಂದು ಗಣರಾಜ್ಯೋತ್ಸವದ ಪರೇಡ್ ನಡೆಯಲಿರುವ ಕರ್ತವ್ಯ ಪಥದಲ್ಲಿ ಭದ್ರತೆಗಾಗಿ 14,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ನವದೆಹಲಿ: ಜನವರಿ 26ರಂದು ಗಣರಾಜ್ಯೋತ್ಸವದ ಪರೇಡ್ ನಡೆಯಲಿರುವ ಕರ್ತವ್ಯ ಪಥದಲ್ಲಿ ಭದ್ರತೆಗಾಗಿ 14,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
77,000 ಆಹ್ವಾನಿತರ ಸುರಕ್ಷತೆ ದೃಷ್ಟಿಯಿಂದ ವ್ಯಾಪಕ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ದೆಹಲಿ ಪೊಲೀಸ್‌ನ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭದ್ರತೆಯ ಹೊಣೆ ಹೊತ್ತಿರುವ ವಿಶೇಷ ಪೊಲೀಸ್ ಆಯುಕ್ತ ದೀಪೇಂದ್ರ ಪಾಠಕ್, ವೃತ್ತಿ ಪರ, ದೃಢ ಮತ್ತು ದೋಷರಹಿತ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸೋಮವಾರ ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಂದರ್ಭ ದೆಹಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಕಾಪಾಡಲಾಗಿದೆ. ನೆರೆ ರಾಜ್ಯಗಳ ನೆರವಿನೊಂದಿಗೆ ಗಡಿಯಲ್ಲಿ ಶಾಂತಿಪಾಲನೆ ಆಗಿದೆ ಎಂದು ಅವರು ಹೇಳಿದರು.
'ಭದ್ರತೆಯ ದೃಷ್ಟಿಯಿಂದ ನವದೆಹಲಿ ಜಿಲ್ಲೆಯನ್ನು 28 ವಲಯಗಳನ್ನಾಗಿ ವಿಂಗಡಿಸಲಾಗಿದೆ. ಈ ವಲಯಗಳ ಹೊಣೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದೆ' ಎಂದು ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತಿರುವ ವಿಶೇಷ ಪೊಲೀಸ್ ಆಯುಕ್ತ ಮಧುಪ್ ತಿವಾರಿ ಹೇಳಿದ್ದಾರೆ.
ಹೆಲ್ಪ್ ಡೆಸ್ಕ್, ಪ್ರಥಮ ಚಿಕಿತ್ಸೆ ಕಿಯಾಸ್ಕ್, ಅತಿಥಿಗಳಿಗಾಗಿ ವಿಶ್ರಾಂತಿ ಕೇಂದ್ರ, ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಸಮಯಕ್ಕೆ ಸರಿಯಾಗಿ ಪರೇಡ್ ಸ್ಥಳಕ್ಕೆ ಆಗಮಿಸಿ, ಭದ್ರತಾ ಸಿಬ್ಬಂದಿ ಜೊತೆ ಸಹಕರಿಸುವಂತೆ ತಿವಾರಿ ಮನವಿ ಮಾಡಿದ್ದಾರೆ.