ನವದೆಹಲಿ: ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನಾದಿನ ಕಳೆದ ಅಧಿವೇಶನದಲ್ಲಿ ಅಮಾನತುಗೊಂಡಿದ್ದ ಪ್ರತಿಪಕ್ಷಗಳ 14 ಸಂಸದರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.
ಸಂಬಂಧಪಟ್ಟ ವಿಶೇಷಾಧಿಕಾರ ಸಮಿತಿಯೊಂದಿಗೆ ಮಾತನಾಡಿ ಅಮಾನತುಗೊಂಡಿದ್ದ ಪ್ರತಿಪಕ್ಷಗಳ 14 ಸಂಸದರ ಅಮಾನತು ಹಿಂಪಡೆಯುವಂತೆ ಉಭಯ ಸದನಗಳ ಸಭಾಧ್ಯಕ್ಷರು ಮತ್ತು ಸಭಾಪತಿಗಳಿಗೆ ಸರ್ಕಾರದ ಮನವಿ ಮಾಡಿದ್ದು, ಮನವಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಿಳಿಸಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ನಿರಂತರ ಪ್ರತಿಭಟನೆ ನಡೆಸಿ ಕಲಾಪಕ್ಕೆ ಅಡ್ಡಿಪಡಿಸಿದ್ದ ಸಂಸದರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಅವರ ನಡವಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ನಂತರ ಅವರ ಅಮಾನತು ಹಿಂಪಡೆಯುವಂತೆ ಲೋಕಸಭೆ ಮತ್ತು ರಾಜ್ಯಸಭೆಯ ಎರಡೂ ಸಮಿತಿಗಳು ಶಿಫಾರಸು ಮಾಡಿದ್ದವು.
ಒಟ್ಟು 146 ಪ್ರತಿಪಕ್ಷ ಸಂಸದರ ಪೈಕಿ 132 ಸಂಸದರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿತ್ತು. ಉಳಿದ 14 ಸಂಸದರನ್ನು ಹಕ್ಕುಬಾಧ್ಯತಾ ಸಮಿತಿಗಳು ನಿರ್ಧರಿಸುವವರೆಗೆ ಅಮಾನತುಗೊಳಿಸಲಾಗಿತ್ತು.
‘ಎಲ್ಲರ ಅಮಾನತು ಹಿಂಪಡೆಯಲಾಗುವುದು. ನಾವು ಸರ್ಕಾರದ ಪರವಾಗಿ ಸ್ಪೀಕರ್ ಮತ್ತು ಸಭಾಪತಿಗೆ ಮನವಿ ಮಾಡಿದ್ದೇವೆ ಮತ್ತು ಅವರು ಒಪ್ಪಿಗೆ ನೀಡಿದ್ದಾರೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.