ರಾಯ್‌ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಮಂಗಳವಾರ ಮಾವೋವಾದಿಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದು, 14 ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭದ್ರತಾ ಸಿಬ್ಬಂದಿಯ ಜಂಟಿ ತಂಡ, ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಟೇಕಲ್‌ಗುಡೆಮ್ ಗ್ರಾಮದ ಬಳಿ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಮಹಾನಿರೀಕ್ಷಕ(ಬಸ್ತರ್ ರೇಂಜ್) ಸುಂದರರಾಜ್ ಪಿ ಅವರು ತಿಳಿಸಿದ್ದಾರೆ.
ದಾಳಿ ನಡೆದ ಗ್ರಾಮವು ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಗಳ ಗಡಿಯಲ್ಲಿದೆ.
ಕೋಬ್ರಾದ 201 ಬೆಟಾಲಿಯನ್ ಮತ್ತು ಸಿಆರ್‌ಪಿಎಫ್‌ನ 150ನೇ ಬೆಟಾಲಿಯನ್ ತಂಡ ಫಾರ್ವರ್ಡ್ ಆಪರೇಟಿಂಗ್ ಬೇಸ್ (ಎಫ್‌ಒಬಿ) ಸ್ಥಾಪಿಸಲು ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನ 1 ಗಂಟೆ ಸುಮಾರಿಗೆ ಗುಂಡಿನ ಕಾಳಗ ಪ್ರಾರಂಭವಾಯಿತು ಎಂದು ಅವರು ಹೇಳಿದ್ದಾರೆ.
ಕಾರ್ಯಾಚರಣೆಯ ವೇಳೆ ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ್ದು, ಸುಮಾರು 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.