ನವದೆಹಲಿ :ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ದೇಶದ ಮತದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜನವರಿ 25 ಅನ್ನು 'ರಾಷ್ಟ್ರೀಯ ಮತದಾರರ ದಿನ'ವನ್ನಾಗಿ ಆಚರಿಸಲಾಗುತ್ತದೆ. ಅದರಂತೆ ದೇಶದಲ್ಲಿ ಇಂದು (ಗುರುವಾರ) 14ನೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ.
ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವರ್ಚುವಲ್ ಮೂಲಕ ಮೊದಲ ಬಾರಿ ಮತ ಚಲಾಯಿಸುವ ಒಂದು ಕೋಟಿಗೂ ಹೆಚ್ಚು ಯುವ ಮತದಾರರೊಂದಿಗೆ ಸಂವಾದ ನಡೆಸಲಿದ್ದಾರೆ.
ಇತಿಹಾಸ ಮತ್ತು ಮಹತ್ವ:
ಮೊಟ್ಟಮೊದಲ 'ರಾಷ್ಟ್ರೀಯ ಮತದಾರರ ದಿನ'ವನ್ನು 2011 ಜನವರಿ 25ರಂದು ಆಚರಿಸಲಾಯಿತು. ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನ(ಜನವರಿ 25, 1950)ವನ್ನು ಗುರುತಿಸಲು ಹಾಗೂ ಹೆಚ್ಚಿನ ಯುವ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಕಾನೂನು ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿತ್ತು.
ಈ ವರ್ಷದ ಥೀಮ್: 'ಮತದಾನಕ್ತಿಂತ ಹೆಚ್ಚು ಯಾವುದೂ ಇಲ್ಲ, ನಾನು ಖಂಡಿತವಾಗಿ ಮತದಾನ ಮಾಡುತ್ತೇನೆ' ಎಂಬುವುದಾಗಿದೆ. ಇದು ಕಳೆದ ವರ್ಷದ ಥೀಮ್‌ನ ಮುಂದುವರಿಕೆಯಾಗಿದೆ.ಆಚರಣೆಯ ಅಂಗವಾಗಿ, ಎಲ್ಲಾ ಸರ್ಕಾರಿ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳು ಮತ್ತು ಸಂಸ್ಥೆಗಳಲ್ಲಿ ಪ್ರತಿಜ್ಞೆಯನ್ನು ಸ್ವೀಕರಿಸಲಾಗುತ್ತದೆ. 'ಭಾರತದ ಪ್ರಜೆಗಳಾದ ನಾವು, ಪ್ರಜಾಪ್ರಭುತ್ವದಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದೇವೆ. ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಲು ಮತ್ತು ಪ್ರತಿ ಚುನಾವಣೆಯಲ್ಲಿ ನಿರ್ಭೀತವಾಗಿ ಮತ್ತು ಪ್ರಭಾವಕ್ಕೆ ಒಳಗಾಗದೆ ಮತದಾನ ಮಾಡಲು ಈ ಮೂಲಕ ಪ್ರತಿಜ್ಞೆ ಮಾಡುತ್ತೇವೆ'.ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞೆ:ನವದೆಹಲಿಯಲ್ಲಿ ಸಮಾರಂಭ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ವರ್ಷ ನವದೆಹಲಿಯಲ್ಲಿ ಭಾರತದ ಚುನಾವಣಾ ಆಯೋಗ ಆಯೋಜಿಸಿರುವ ರಾಷ್ಟ್ರೀಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್ ಅವರು ಗೌರವ ಅತಿಥಿಯಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಚುನಾವಣಾ ನಿರ್ವಹಣಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳೂ ಭಾಗವಹಿಸಲಿದ್ದಾರೆ.
ಭಾರತದ ಮಾದರಿಯನ್ನು ಅನುಕರಿಸಿ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಮತ್ತು ಭೂತಾನ್ ಸೇರಿದಂತೆ ಇತರ ದೇಶಗಳು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲು ಪ್ರಾರಂಭಿಸಿವೆ.