ಮಲಪ್ಪುರಂ: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ ಕೇರಳದ ನ್ಯಾಯಾಲಯವು ಒಟ್ಟು 150 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಇಲ್ಲಿನ ಪೆರಿಂದಲ್‌ಮಣ್ಣ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶೆ ಸಿನಿ ಎಸ್.ಆರ್. ಅವರು ಆರೋಪಿಯ ವಿರುದ್ಧ ದಾಖಲಾಗಿದ್ದ ಪೋಕ್ಸೊ ಕಾಯ್ದೆ, ಐಪಿಸಿ, ಹಾಗೂ ಬಾಲನ್ಯಾಯ ಕಾಯ್ದೆಯಡಿ ಸೇರಿ ಒಟ್ಟು 150 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಒಂದು ಕಾಯ್ದೆಯಡಿ 40 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಎಲ್ಲಾ ಶಿಕ್ಷೆಯನ್ನು ಏಕಕಾಲಕ್ಕೆ ಅನುಭವಿಸುವುದರಿಂದ 40 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಲಿದ್ದಾರೆ ಎಂದು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಆದೇಶ ಪ್ರತಿಯಲ್ಲಿ ಹೇಳಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(3)ರಡಿ 30 ವರ್ಷ, ಪೋಕ್ಸೊ ಕಾಯ್ದೆಯಡಿ 30 ವರ್ಷ ಸಜೆ ವಿಧಿಸಲಾಗಿದೆ.
ಜತೆಗೆ ಪೋಕ್ಸೊ ಕಾಯ್ದೆಯ ಸೆಕ್ಷನ್ 5(ಐ) ಹಾಗೂ 5(ಎನ್) ನಡಿ ತಲಾ 40 ವರ್ಷಗಳ ಶಿಕ್ಷೆ ವಿಧಿಸಿದೆ. ಇದಲ್ಲದೆ ಐಪಿಸಿ ಕಾಯ್ದೆಯ ಸೆಕ್ಷನ್ 450ರಡಿ 7 ವರ್ಷ ಹಾಗೂ ಬಾಲನ್ಯಾಯ ಕಾಯ್ದೆಯ ಸೆಕ್ಷನ್ 75ರಡಿ ಮೂರು ವರ್ಷಗಳ ಶಿಕ್ಷೆ ವಿಧಿಸಲಾಗಿದೆ.
ಜೈಲು ಶಿಕ್ಷೆಯ ಜತೆಗೆ ₹4 ಲಕ್ಷ ದಂಡವನ್ನೂ ವಿಧಿಸಲಾಗಿದ್ದು, ಈ ಪೈಕಿ ₹2 ಲಕ್ಷವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು ಎಂದು ಸೂಚಿಸಲಾಗಿದೆ.
2022ರಲ್ಲಿ ಈ ಘಟನೆ ನಡೆದಿದ್ದು, ದೋಷಿಯ ಮೂವರು ಪತ್ನಿಯರ ಪೈಕಿ ಒಬ್ಬರ ಪುತ್ರಿ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ಹೇಳಿದ್ದಾರೆ.