ಗಿರ್ ಸೋಮನಾಥ್: ಇಲ್ಲಿನ ಸೋಮನಾಥ ದೇಗುಲ ಟ್ರಸ್ಟ್ ಹಾಗೂ ರಾಜ್ಯ ಸರ್ಕಾರಕ್ಕೆ ಸೇರಿದ 3 ಹೆಕ್ಟೇರ್ ಜಮೀನಿನಲ್ಲಿ ಅತಿಕ್ರಮಣ ತೆರವುಗೊಳಿಸುವ ಬೃಹತ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸೋಮನಾಥ ದೇಗುಲ ಟ್ರಸ್ಟ್ ಹಾಗೂ ಸರ್ಕಾರಕ್ಕೆ ಸೇರಿದ ಜಮೀನಿನಲ್ಲಿ ಅನಧೀಕೃತವಾಗಿ ನಿರ್ಮಿಸಲಾಗಿದ್ದ 21 ಮನೆಗಳು ಹಾಗೂ 153 ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ ಎಂದು ಕಲೆಕ್ಟರ್ ಹಾಜ್ರಿ ವಧ್‌ವನಿಯಾ ತಿಳಿಸಿದ್ದಾರೆ.
ಐದು ಮಂದಿ ಮಾಮ್ಲತ್‌ದಾರ್ (ಸರ್ಕಾರದ ಗೆಜೆಟೆಡ್ ಅಧಿಕಾರಿ) ಹಾಗೂ 100 ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಶನಿವಾರ ಬೆಳಿಗ್ಗೆ ಈ ಕಾರ್ಯಾಚರಣೆ ಆರಂಭವಾಗಿದೆ. ಕಾರ್ಯಾಚರಣೆ ಸುಗಮವಾಗಿ ನಡೆಯಲು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
3 ಹೆಕ್ಟೇರ್ ಪ್ರದೇಶದಲ್ಲಿದ್ದ ಅತಿಕ್ರಮಣಗಳನ್ನೆಲ್ಲಾ ತೆರವುಗೊಳಿಸಿ, ಕಂದಾಯ ಇಲಾಖೆಯ ನಿರ್ದೇಶನದಂತೆ ಬೇಲಿ ಹಾಕಲಾಗುವುದು ಎಂದು ತಿಳಿಸಿದ್ದಾರೆ.
'ಈ ಕಾರ್ಯಾಚರಣೆಗೂ ಮುನ್ನ ಜ.25ರಂದು ಅತಿಕ್ರಮಣಗಾರರ ಜತೆ ಸಭೆ ನಡೆಸಿ, ತೆರವು ಪ್ರಕ್ರಿಯೆಯ ಬಗ್ಗೆ ತಿಳಿಸಿದ್ದೇವೆ. ಮನೆಯ ವಸ್ತುಗಳನ್ನು ಖಾಲಿ ಮಾಡಲು ಅವರಿಗೆ ಟ್ರ್ಯಾಕ್ಟರ್‌ಗಳು ಹಾಗೂ ಕೂಲಿಗಳನ್ನು ಒದಗಿಸಲಾಗಿದೆ. ಆಹಾರದ ವ್ಯವಸ್ಥೆಯನ್ನೂ ಆಡಳಿತ ಮಾಡಿದೆ' ಎಂದು ವಧ್‌ವನಿಯಾ ಹೇಳಿದ್ದಾರೆ.
ರಾಜ್ಯ ಮೀಸಲು ಪೊಲೀಸ್‌ನ 2 ತುಕಡಿಗಳು, 500 ಪೊಲೀಸ್ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ. ತುರ್ತು ಸಹಾಯಕ್ಕೆ ಅಗ್ನಿಶಾಮಕ ಸಿಬ್ಬಂದಿ, ರ‍್ಯಾಪಿಡ್ ಆಯಕ್ಷನ್ ಫೋರ್ಸ್ ಹಾಗೂ ಕ್ವಿಕ್ ರೆಸ್ಪಾನ್ಸ್ ಟೀಂ ಕೂಡ ಸ್ಥಳದಲ್ಲಿದೆ.