ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಂಟ್ ಫುಡ್ ಐಟಂಗಳೆಂದರೆ ಎಲ್ಲರಿಗೂ ಇಷ್ಟ. ಅಡುಗೆ ಮನೆಯಲ್ಲಿ ಗಂಟೆಗಳ ಹೊತ್ತು ಕಾಲ ಕಳೆಯಲು ಯಾರಿಗೂ ಇಷ್ಟವಾಗುವುದಿಲ್ಲ. ಅಲ್ಲದೆ ಅಷ್ಟು ಸಮಯವೂ ಅವರಿಗೆ ಇರುವುದಿಲ್ಲ. ಹೀಗಾಗಿ ಅವರು ಅತೀ ಕಡಿಮೆ ಸಮಯದಲ್ಲಿ ಮಾಡಬಹುದಾದ ಆಹಾರವನ್ನು ಮಾಡಲು ಇಷ್ಟ ಪಡುತ್ತಾರೆ. ಗಡಿಬಿಡಿಯ ಜೀವನದಲ್ಲಿ ಸರಳವಾಗಿ ತಯಾರಿಸಬಹುದಾದ ಮತ್ತು ದೀರ್ಘಕಾಲ ಬಾಳಿಕೆ ಬರುವ ಖಾದ್ಯವನ್ನು ಎಲ್ಲರೂ ಇಷ್ಟಪಡುತ್ತಾರೆ.
ರೆಡಿಮೇಡ್ ಆಹಾರ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಸ್ವಾದಿಷ್ಟವಾಗಿ ನಿಮ್ಮ ಕೈಯಲ್ಲೇ ಮಾಡಿ ತಯಾರಿಸಬಹುದಾದ ಖಾದ್ಯಗಳು ನಿಮಗೂ ಖುಷಿಯನ್ನು ನೀಡುತ್ತದೆ ಜೊತೆಗೆ ನಿಮ್ಮ ಮನೆಯವರಿಗೂ ಆನಂದನ್ನು ಉಂಟುಮಾಡುತ್ತದೆ. ಇಂತಹ ಒಂದು ರೆಸಿಪಿ ಎಂದರೆ ಅದು ಟೊಮೇಟೋ ಚಟ್ನಿ.ಟೊಮೇಟೊ ಚಟ್ನಿಯನ್ನು ಈರುಳ್ಳಿಯೊಂದಿಗೆ ಹುರಿದು ಬೇರೆ ಮಸಾಲಾ ಸಾಮಾಗ್ರಿಗಳೊಂದಿಗೆ ಅದನ್ನು ರುಬ್ಬಿ ನಂತರ ಬೇಯಿಸಿ ಮಾಡುವ ಚಟ್ನಿಯಿಂದ ಬಾಯಲ್ಲಿ ನೀರೂರುವುದು ಖಂಡಿತ. ನಿಮ್ಮೆಲ್ಲಾ ತಿಂಡಿಗೆ ಇದು ಉತ್ತಮ ಸಾಥ್ ಕೂಡ ನೀಡುತ್ತದೆ. ಹಾಗಿದ್ದರೆ ಈ ರೆಸಿಪಿ ಬಗ್ಗೆ ತಿಳಿದುಕೊಳ್ಳೋಣ. ಸಾಮಾಗ್ರಿಗಳು *ಟೊಮೇಟೊ - 1/2 ಕೆ.ಜಿ *ಈರುಳ್ಳಿ - 2 *ಬೆಳ್ಳುಳ್ಳಿ - 10 ಎಸಳು *ಒಣಮೆಣಸಿನಕಾಯಿ - 2- 3 (ಸಣ್ಣದಾಗಿ ಕತ್ತರಿಸಲಾಗಿರುವ) *ಹುಣಸೆಹಣ್ಣು - ಸಣ್ಣ ತುಂಡು *ಉಪ್ಪು -ರುಚಿಗೆ ತಕ್ಕಷ್ಟು *ಕೊತ್ತಂಬರಿ ಸೊಪ್ಪು - ಸ್ವಲ್ಪ (ಸಣ್ಣದಾಗಿ ಕತ್ತರಿಸಲಾಗಿರುವ) *ಕರಿಬೇವಿನ ಸೊಪ್ಪು- 4-5 ಎಸಳು ಒಗ್ಗರಣೆಗೆ *ಸಾಸಿವೆ - ಅರ್ಧ ಚಮಚ *ಜೀರಿಗೆ - ಅರ್ಧ ಚಮಚ *ಇಂಗು - ಚಿಟಿಕೆಯಷ್ಟು
*ಮೊದಲಿಗೆ ಬಾಣಲೆಯನ್ನು ಒಲೆ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ ಬೆಳ್ಳುಳ್ಳಿ ಟೊಮೇಟೋ ಮತ್ತು ಒಣಮೆಸಿನಕಾಯಿಯನ್ನು ಚೆನ್ನಾಗಿ ಹುರಿದುಕೊಳ್ಳಿ *ಚೆನ್ನಾಗಿ ಹುರಿದುಕೊಂಡ ನಂತರ ಕೊತ್ತಂಬರಿ ಸೊಪ್ಪು, ಕರಿಬೇವಿನೆಸಳು, ಹುಣಸೆಹಣ್ಣು ಮತ್ತು ಉಪ್ಪು ಸೇರಿಸಿ ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ *ಇನ್ನು ಸಾಸಿವೆ, ಇಂಗು, ಜೀರಿಗೆಯ ಒಗ್ಗರಣೆಯನ್ನು ರೆಡಿ ಮಾಡಿ ಈ ಚಟ್ನಿಗೆ ಸೇರಿಸಿ. ನಂತರ ಈ ಟೊಮೇಟೊ ಚಟ್ನಿಯನ್ನು ಚೆನ್ನಾಗಿ ಕುದಿಸಿಕೊಳ್ಳಿ. ಈ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಿಕೊಳ್ಳಿ. *ದೋಸೆ ಚಪಾತಿಗೆ ನೆಂಜಿಕೊಳ್ಳಲು ಇದು ಅತ್ಯುತ್ತಮ ಕಾಂಬಿನೇಶನ್ ಆಗಿದೆ.
ಇಷ್ಟೆಲ್ಲಾ ಮಾಡಲು ನಿಮಗೆ ತಗುಲುವುದು ಬರಿ ಅರ್ಧ ಗಂಟೆಯ ಕಾಲ ಅಷ್ಟೇ ಹೀಗಾಗಿ ಈ ಚಟ್ನಿಯನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಅತೀ ಕಡಿಮೆ ಸಮಯದಲ್ಲಿ ನೀವು ಇದನ್ನು ಮಾಡಿ ಮುಗಿಸಬಹುದು. ಇಷ್ಟೇ ಅಲ್ಲ ಅಡುಗೆಗೆ ಬೇರೆ ಯಾರಾದರು ಸಹಾಯ ಮಾಡುವವರಿದ್ದರೆ ಈ ಟೊಮೇಟೋ ಚಟ್ನಿಯನ್ನು ಕೇವಲ 15 ನಿಮಿಷದಲ್ಲಿ ಸವಿಯಲು ಟೇಬಲ್ ಮೇಲೆ ಇಡಬಹುದು.