ರಾಂಚಿ: ಈ ಹಿಂದೆ ಉದ್ಯಮ ಪಾಲುದಾರರಾಗಿದ್ದ ಇಬ್ಬರು ತಮಗೆ ₹ 16 ಕೋಟಿ ವಂಚಿಸಿದ್ದಾರೆ ಎಂದು ಆರೋಪಿಸಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಆರ್ಕಾ ಸ್ಪೋರ್ಟ್ ಅಕಾಡೆಮಿಯ ಇಬ್ಬರು ನಿರ್ದೇಶಕರ ವಿರುದ್ಧ ರಾಂಚಿಯ ಕೆಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
'ಆರ್ಕಾ ಸ್ಪೋರ್ಟ್ ಅಕಾಡೆಮಿ ನಿರ್ದೇಶಕರಾದ ಮಿಹಿರ್ ದಿವಾಕರ್ ಮತ್ತು ಸೌಮ್ಯ ಬಿಸ್ವಾಸ್ ವಿರುದ್ಧ ಐಪಿಸಿ ಸೆಕ್ಷನ್ 406 (ನಂಬಿಕೆ ದ್ರೋಹ) ಹಾಗೂ 420 (ವಂಚನೆ) ಅಡಿಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ' ಎಂದು ಧೋನಿ ಪರ ವಕೀಲ ಹಾಗೂ ಕಾನೂನು ಸಲಹಾ ಸಂಸ್ಥೆ 'ವಿಧಿ ಅಸೋಸಿಯೇಷನ್ಸ್'ನ ದಯಾನಂದ್ ಸಿಂಗ್ ಹೇಳಿದ್ದಾರೆ.
'2017ರಲ್ಲಿ ಧೋನಿ ಅವರನ್ನು ಭೇಟಿಯಾಗಿದ್ದ ಆರೋಪಿಗಳು, ಭಾರತ ಹಾಗೂ ವಿದೇಶಗಳಲ್ಲಿ ಕ್ರಿಕೆಟ್ ಅಕಾಡೆಮಿ ತೆರೆಯುವಂತೆ ಕೇಳಿದ್ದರು. ಆರಂಭದಲ್ಲಿ ನಡೆದ ಮಾತುಕತೆ ವೇಳೆ, ಧೋನಿ ಹೆಸರಿನಲ್ಲಿ ಅಕಾಡೆಮಿ ತೆರೆಯಲು ಫ್ರಾಂಚೈಸಿ ಮೊತ್ತ ಭರಿಸುವುದಾಗಿ ಹಾಗೂ ಆದಾಯವನ್ನು 70:30ರ ಅನುಪಾತದಲ್ಲಿ ಹಂಚಿಕೊಳ್ಳುವುದಾಗಿ ಅವರು ಕರಾರು ಮಾಡಿಕೊಂಡಿದ್ದರು. ಆದರೆ, ಅದಾದ ನಂತರ ಧೋನಿಗೆ ಹಣ ಪಾವತಿಸಿದೆ ಮತ್ತು ವಿಚಾರ ತಿಳಿಸದೆ ಅಕಾಡೆಮಿ ಸ್ಥಾಪನೆಗೆ ಸಿದ್ಧತೆ ಆರಂಭಿಸಿದ್ದರು. ಹೀಗಾಗಿ ಅವರಿಗೆ ನೀಡಿದ್ದ ಹಕ್ಕು ಪತ್ರವನ್ನು 2021ರ ಆಗಸ್ಟ್ 15ರಂದು ಹಿಂಪಡೆಯಲಾಗಿತ್ತು' ಎಂದು ದಯಾನಂದ್ ತಿಳಿಸಿದ್ದಾರೆ.
'ಆದಾಗ್ಯೂ ಅವರು (ಪಾಲುದಾರರು) ಮತ್ತೊಮ್ಮೆ ಯಾವ ಮಾಹಿತಿಯನ್ನೂ ನೀಡದೆ, ಅಕಾಡೆಮಿ ತೆರೆಯುವ ಪ್ರಕ್ರಿಯೆಯನ್ನು ಮುಂದುವರಿಸಿದ್ದರು. ಹಾಗಾಗಿ, ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ದಿವಾಕರ್ ಮತ್ತು ಬಿಸ್ವಾಸ್ ಅವರಿಗೆ ಎರಡು ಬಾರಿ ನೋಟಿಸ್ ಕಳುಹಿಸಲಾಗಿತ್ತು. ಅವರು ಧೋನಿ ಬಳಿ ಹಣ ಪಡೆದು ಎಂಟರಿಂದ ಹತ್ತು ಕಡೆ ಅಕಾಡೆಮಿ ತೆರೆದಿದ್ದಾರೆ. ಇದರಿಂದ ಧೋನಿಗೆ ₹ 16 ಕೋಟಿ ನಷ್ಟವಾಗಿದೆ' ಎಂದು ವಿವರಿಸಿದ್ದಾರೆ.
ರಾಂಚಿಯ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ 2023ರ ಅಕ್ಟೋಬರ್ 27ರಂದು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಧೋನಿ ಪರ ಅಧಿಕೃತವಾಗಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿದ್ದ ಸೀಮಂತ್ ಲೊಹಾನಿ ಎಂಬವರು ಹೇಳಿಕೆ ದಾಖಲಿಸಿದ್ದಾರೆ ಎಂದೂ ದಯಾನಂದ್ ಮಾಹಿತಿ ನೀಡಿದ್ದಾರೆ.