ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳು ಕೇರಳ ಪ್ರವಾಸ ಕೈಗೊಳ್ಳಲಿದ್ದಾರೆ. ಒಂದು ತಿಂಗಳೊಳಗೆ ಅವರ ಎರಡನೇ ಭೇಟಿಯಾಗಿದೆ. ಜನವರಿ 16 ರಂದು ಕೊಚ್ಚಿಯಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ಬಿಜೆಪಿಯ ರಾಜ್ಯ ಘಟಕವು ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲು ಮೋದಿ ಜನವರಿ 3 ರಂದು ಕೇರಳಕ್ಕೆ ಬಂದಿದ್ದರು.
ಜ.16ರಂದು ಕೊಚ್ಚಿಗೆ ತಲುಪಲಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ರೋಡ್ ಶೋ ನಡೆಸಲಿದ್ದಾರೆ. ಜನವರಿ 17 ರಂದು ಬುಧವಾರ ಗುರುವಾಯೂರಿಗೆ ತೆರಳಲಿದ್ದಾರೆ. ಬೆಳಗ್ಗೆ 7 ಗಂಟೆಗೆ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ನಟ-ರಾಜಕಾರಣಿ ಸುರೇಶ್ ಗೋಪಿ ಅವರ ಮಗಳ ಮದುವೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಕುರಿತು ಚರ್ಚೆ: ಮುಂಬರುವ ಲೋಕಸಭೆ ಚುನಾವಣೆಗೆ ಜನವರಿ 27 ರೊಳಗೆ ತನ್ನ ಸ್ಟಾರ್ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ನಿರ್ಧರಿಸಿದೆ. ಪಕ್ಷದಿಂದ ಹಲವು ಲೋಕಸಭೆ ಕ್ಷೇತ್ರಗಳಲ್ಲಿ ಪಾದಯಾತ್ರೆಗಳನ್ನು ನಡೆಸಲು ಯೋಜನೆ ರೂಪಿಸಲಿದೆ. ತ್ರಿಶೂರ್‌ನಲ್ಲಿ ಸುರೇಶ್ ಗೋಪಿ, ಅಟ್ಟಿಂಗಲ್‌ನಲ್ಲಿ ವಿ ಮುರಳೀಧರನ್ ಮತ್ತು ಪಾಲಕ್ಕಾಡ್‌ಗೆ ಸಿ ಕೃಷ್ಣಕುಮಾರ್ ಹೆಸರುಗಳು ಚರ್ಚೆಯಲ್ಲಿವೆ. ತಿರುವನಂತಪುರಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಣಕ್ಕಿಳಿಸಲು ಬಿಜೆಪಿಯ ರಾಜ್ಯ ಘಟಕವು ಹೈಕಮಾಂಡ್ ಅನ್ನು ಕೇಳಿದೆ ಎಂದು ವರದಿಯಾಗಿದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ನಾಯಕರ ಭೇಟಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಉತ್ತೇಜನ ನೀಡಲಿದೆ ಎಂದು ಬಿಜೆಪಿ ರಾಜ್ಯ ನಾಯಕತ್ವ ಅಭಿಪ್ರಾಯಪಟ್ಟಿದೆ.