ಪತ್ತನಂತಿಟ್ಟ: ಹೊಸ ವರ್ಷದ ದಿನವಾದ ನಿನ್ನೆ ನಾಲ್ವರು ಭಕ್ತರು ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ ಸೇವೆ ಸಲ್ಲಿಸಿರುವರು. 18,018 ತೆಂಗಿನಕಾಯಿಗಳಲ್ಲಿ ತುಪ್ಪ ತುಂಬಿಸಿ ಅಭಿಷೇಕ ನಡೆಸಲಾಯಿತು.
ಬೆಂಗಳೂರಿನ ವಿಷ್ಣು ಶರಣ ಭಟ್, ಉಣ್ಣಿಕೃಷ್ಣನ್ ಪೋತ್ತಿ, ರಮೇಶ್ ರಾವ್ ಮತ್ತು ದೊರೈ ಎಂಬವರು ಈ ಸೇವೆ ಅರ್ಪಿಸಿದರು. ನಿನ್ನೆ ಮುಂಜಾನೆ ಮೂರು ಗಂಟೆಗೆ ಗರ್ಭಗೃಹದ ಬಾಗಿಲು ತೆರೆಯಲಾಯಿತು. ನಿರ್ಮಾಲ್ಯ ದರ್ಶನ ಮತ್ತು ನಿತ್ಯ ಅಭಿಷೇಕದ ನಂತರ ತುಪ್ಪಾಭಿಷೇಕ ಮಾಡಲಾಯಿತು.
ತಂತ್ರಿ ಕಂಠಾರರ್ ಮಹೇಶ ಮೋಹನರ್ ನೇತೃತ್ವದಲ್ಲಿ ಮೇಲ್ಶಾಂತಿ ಪಿ.ಎಂ.ಮಹೇಶ ನಂಬೂದಿರಿ ಅಭಿಷೇಕ ನೆರವೇರಿಸಿದರು. ಮುಂಜಾನೆ 3.30ರಿಂದ 7ರವರೆಗೆ ಮತ್ತು ನಂತರ 8ರಿಂದ 11.30ರವರೆಗೆ ತುಪ್ಪಾಭಿಷೇಕ ನಡೆಯಿತು. ಬೆಳಗ್ಗೆ ತಂತ್ರಿಗಳ ನೇತೃತ್ವದಲ್ಲಿ ಗಣೇಶ ಹೋಮ ನಡೆಯಿತು. ಏತನ್ಮಧ್ಯೆ ನಿನ್ನೆ ಸನ್ನಿಧಾನಂನಲ್ಲಿ ಅಪಾರ ಭಕ್ತ ಸಮೂಹ ನೆರೆದಿತ್ತು.