ನವದೆಹಲಿ: ಒಂಬತ್ತು ವರ್ಷದ ಪರ್ವತಾರೋಹಿ, ಕಿರಿಯ ಎಐ ವಿಜ್ಞಾನಿ, ವಿಶೇಷ ಸಾಮರ್ಥ್ಯವುಳ್ಳ ಚಿತ್ರಕಾರ, 'ಗೂಗಲ್ ಬಾಯ್' ಸೇರಿದಂತೆ ದೇಶದ 19 ಮಕ್ಕಳು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕರಕ್ಕೆ (2024) ಸೋಮವಾರ ಬಾಜನರಾದರು.
ಅಸಾಧಾರಣ ಸಾಧನೆಗಳನ್ನು ತೋರಿರುವ ಈ ಮಕ್ಕಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಮಹಾರಾಷ್ಟ್ರದ 12 ವರ್ಷದ ಬಾಲಕ ಆದಿತ್ಯ ವಿಜಯ್ ಬ್ರಾಹ್ಮಣೆ ಅವರ ಅಪ್ರತಿಮ ಧೈರ್ಯಕ್ಕಾಗಿ ಮರಣೋತ್ತರವಾಗಿ ಪ್ರಶಸ್ತಿ ವಿತರಿಸಲಾಯಿತು. ನದಿಯಲ್ಲಿ ಮುಳುಗುತ್ತಿದ್ದ ತನ್ನ ಸಹೋದರ ಸಂಬಂಧಿಗಳಾದ ಹರ್ಷ ಮತ್ತು ಶ್ಲೋಕ್ ಅವರನ್ನು ರಕ್ಷಿಸಿ, ಆದಿತ್ಯ ಅಸುನೀಗಿದ್ದರು.
ಕರ್ನಾಟಕದ 9 ವರ್ಷದ ಎ. ಚಾರ್ವಿ ಅವರು 8 ವರ್ಷದೊಳಗಿನ ವಿಶ್ವ ಚೆಸ್ ಚಾಂಪಿಯನ್ ಆದವರು. ಈ ಮೂಲಕ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ರಾಜಸ್ಥಾನದ 17 ವರ್ಷದ ಚತುರ ಬಾಲಕ ಆರ್ಯನ್ ಸಿಂಗ್, ರೈತರ ಜೀವನವನ್ನು ಸರಳಗೊಳಿಸುವುದಕ್ಕೆ ಪೂರಕವಾಗಿ ಆಗ್ರೊಬೋಟ್, ಕೃತಕ ಬುದ್ಧಮತ್ತೆ ಚಾಲಿತ ರೋಬೋಟ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸಂಯೋಜಿಸಿದ್ದಾರೆ.
ಛತ್ತೀಸಗಢದಲ್ಲಿ 'ಗೂಗಲ್ ಬಾಯ್' ಎಂದೇ ಪ್ರಸಿದ್ಧಿಯಾಗಿರುವ 6 ವರ್ಷದ ಅರ್ಮಾನ್ ಉಭ್ರಾನಿ, ಗಣಿತ ಮತ್ತು ವಿಜ್ಞಾನದಲ್ಲಿ ಅತ್ಯುತ್ತಮ ಪರಾಕ್ರಮ ಮೆರೆದಿದ್ದಾರೆ. ಪುಸ್ತಕ ಸರಣಿಯ ಕಿರಿಯ ಲೇಖಕ ಎಂಬ ಹಿರಿಮೆಯೂ ಇವರಿಗಿದೆ.
ಉತ್ತರ ಪ್ರದೇಶದ ಎಂಟು ವರ್ಷದ ಅನುಷ್ಕಾ ಪಾಠಕ್ ಅವರು ಅಸಾಧಾರಣ 'ಕಥಾ ವಾಚನ' (ಧಾರ್ಮಿಕ ಪಠ್ಯ ನಿರೂಪಣೆ) ಸಾಮರ್ಥ್ಯ ಹೊಂದಿದ್ದಾರೆ. ಪಶ್ಚಿಮ ಬಂಗಾಳದ 13 ವರ್ಷದ ಅರಿಜೀತ್ ಬ್ಯಾನರ್ಜಿ ಅವರು ಪಖಾವಾಜ್ ನುಡಿಸುವಲ್ಲಿ ಮಹತ್ವದ ಛಾಪು ಮೂಡಿಸಿದ್ದಾರೆ.
ತೀವ್ರತರವಾದ ಸೆರೆಬ್ರಲ್ ಪಾಲ್ಸಿ ಸಮಸ್ಯೆ ಎದುರಿಸುತ್ತಿದ್ದರೂ ಗುಜರಾತಿನ 13 ವರ್ಷದ ಹೆಟ್ವಿ ಕಾಂತಿಭಾಯ್ ಖಿಮ್ಸೂರ್ಯ ಅಸಾಮಾನ್ಯ ಕಲಾತ್ಮಕ ಸಾಮರ್ಥ್ಯ ಹೊಂದಿದ್ದಾರೆ. ಅವರು 250 'ಫ್ರೀ-ಹ್ಯಾಂಡ್ ಪೇಂಟಿಂಗ್' ಕೃತಿಗಳನ್ನು ರಚಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
'ಡೌನ್ ಸಿಂಡ್ರೋಮ್' ಹೊರತಾಗಿಯೂ ಮಧ್ಯಪ್ರದೇಶದ ಒಂಬತ್ತು ವರ್ಷದ ಅವ್ನಿಶ್ ತಿವಾರಿ ಏಳನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ವರೆಗೆ ಚಾರಣ ಮಾಡಿ ಸಾಧನೆ ಮಾಡಿದ್ದರು. ದೃಷ್ಟಿ ದೋಷ ಹೊಂದಿರುವ ಹರಿಯಾಣದ ಒಂಬತ್ತು ವರ್ಷದ ಗರಿಮಾ 'ಸಾಕ್ಷರ ಪಾಠಶಾಲಾ' ಮೂಲಕ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ಇವರೇ ಅಲ್ಲದೆ, ಬಿಹಾರದ ಮೊಹಮ್ಮದ್ ಹುಸೇನ್ (16), ತೆಲಂಗಾಣದ ಪೆಂಡ್ಯಾಲ ಲಕ್ಷ್ಮಿ ಪ್ರಿಯಾ (14), ಜಮ್ಮು ಮತ್ತು ಕಾಶ್ಮೀರದ ಇಶ್ಫಾಕ್ ಹಮೀದ್ (12), ದೆಹಲಿಯ ಸುಹಾನಿ ಚೌಹಾನ್ (16), ತ್ರಿಪಾರಾದ ಜ್ಯೋತ್ಸ್ನಾ ಅಕ್ತರ್ (16), ಅಸ್ಸಾಂನ ಸಾಯಂ ಮಜುಂದಾರ್ (15), ಉತ್ತರ ಪ್ರದೇಶದ ಆದಿತ್ಯ ಯಾದವ್ (12), ಅರುಣಾಚಲ ಪ್ರದೇಶದ ಜೆಸಿಕ್ಕಾ ನೇಯಿ ಸರಿಂಗ್ (9), ಮಣಿಪುರದ ಲಿಂತೋಯ್ ಚನಂಬಮ್ (17), ಆಂಧ್ರ ಪ್ರದೇಶದ ಆರ್. ಸೂರ್ಯ ಪ್ರಸಾದ್ (9) ಅವರಿಗೆ ವಿವಿಧ ವಿಭಾಗಗಳಲ್ಲಿ ಮಾಡಿರುವ ಅತ್ಯುತ್ತಮ ಸಾಧನೆಗಾಗಿ ಬಾಲ ಪುರಸ್ಕಾರ ನೀಡಲಾಯಿತು.