ಜೌನ್‌ಪುರ: 2005ರ ಶ್ರಮಜೀವಿ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದಲ್ಲಿ ಅಪರಾಧಿಗಳಾಗಿರುವ ಇಬ್ಬರಿಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ(ಐ) ರಾಜೇಶ್ ರೈ ಅವರು ಗಲ್ಲು ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ.
ಜುಲೈ 28, 2005 ರಂದು ಉತ್ತರ ಪ್ರದೇಶದ ಜೌನ್‌ಪುರ ರೈಲು ನಿಲ್ದಾಣದ ಬಳಿ ಶ್ರಮಜೀವಿ ಎಕ್ಸ್‌ಪ್ರೆಸ್ ಕೋಚ್‌ನಲ್ಲಿ ಸ್ಫೋಟ ಸಂಭವಿಸಿ 14 ಜನರು ಸಾವನ್ನಪ್ಪಿದರು ಮತ್ತು 61 ಜನ ಗಾಯಗೊಂಡಿದ್ದರು.
ಸ್ಫೋಟ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ(ಐ) ರಾಜೇಶ್ ರೈ ಅವರು, ಕಳೆದ ಡಿಸೆಂಬರ್ 22 ರಂದು ಹರ್ಕತ್-ಉಲ್-ಜಿಹಾದ್-ಅಲ್-ಇಸ್ಲಾಮಿಯ ಸಂಘಟನೆಯ ಇಬ್ಬರು ಕಾರ್ಯಕರ್ತರಾದ ಹಿಲಾಲುದ್ದೀನ್ ಮತ್ತು ನಫಿಕುಲ್ ಬಿಸ್ವಾಸ್ ತಪ್ಪಿತಸ್ಥರೆಂದು ತೀರ್ಪು ನೀಡಿದ್ದರು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಿದ್ದಾರೆ.
ಬಾಂಗ್ಲಾದೇಶ ನಿವಾಸಿ ಹಿಲಾಲುದ್ದೀನ್ ವಿರುದ್ಧ ರೈಲಿನಲ್ಲಿ ಬಾಂಬ್ ಇಟ್ಟ ಆರೋಪ ಹೊರಿಸಿದ್ದರೆ, ಪಶ್ಚಿಮ ಬಂಗಾಳದ ನಿವಾಸಿ ನಫಿಕುಲ್ ಬಿಸ್ವಾಸ್ ವಿರುದ್ಧ ಸಹಾಯ ಮಾಡಿದ ಆರೋಪವಿದೆ. ಸದ್ಯ ಈ ಇಬ್ಬರು ಅಪರಾಧಿಗಳು ಮತ್ತೊಂದು ಪ್ರಕರಣದಲ್ಲಿ ಹೈದರಾಬಾದ್ ಜೈಲಿನಲ್ಲಿದ್ದಾರೆ.
ಶ್ರಮಜೀವಿ ರೈಲು ಸ್ಫೋಟ ಪ್ರಕರಣದಲ್ಲಿ ಇತರ ಇಬ್ಬರಿ ಅಪರಾಧಿಗಳಿಗೆ 2016ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.